ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಮುಂಡಗೋಡ ತಾಲೂಕಿನ ಕರಗಿನಕೊಪ್ಪ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಈ ಸಲ ವಿಧ್ಯಾರ್ಥಿಗಳ ಗಲಾಟೆಯಿಂದ ಪೋಲಿಸ್ ಠಾಣೆ ಮೆಟ್ಟಿಲೇರಿ ಸದ್ದು ಮಾಡುತ್ತಿದೆ.
ಘಟನೆಯ ವಿವರ: ರವಿವಾರ ರಾತ್ರಿ ಹೊತ್ತಿನಲ್ಲಿ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಗಲಾಟೆಗೆ ತಿರುಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ ಕಾಲೇಜಿನ ಪ್ರಾಂಶುಪಾಲ ಆನಂದ ಚಿಕ್ಕೋಡಿ ಅವರು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯುತ್ತಿರುವಾಗ.
ಈ ವೇಳೆ ವಿದ್ಯಾರ್ಥಿಯ ಪಾಲಕರು ಹಾಗೂ ಅವರೊಂದಿಗಿದ್ದ ಕೆಲವರು ಅನುಮತಿ ಇಲ್ಲದೆ ತರಗತಿ ಕೊಠಡಿಗೆ ಪ್ರವೇಶಿಸಿ, ವೆಂಕಟೇಶ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಮುಂದಾದ ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ಇತರ ವಿದ್ಯಾರ್ಥಿಗಳ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹಳಿಯಾಳ | ಸಿದ್ದಿ ಸಮುದಾಯದ ಯುವತಿಯರ ರಾಷ್ಟ್ರೀಯ ಸಾಧನೆ; ಶಾಲಿನಾಗೆ ಬೆಳ್ಳಿ, ಪ್ರಿನ್ಸಿಟಾಗೆ ಕಂಚು
ಈ ಕುರಿತು ಪ್ರಾಂಶುಪಾಲ ಆನಂದ ಚಿಕ್ಕೋಡಿ ಅವರು ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಗುನ್ನಾ ಸಂಖ್ಯೆ 142/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS-2023)ಯ ಕಲಂ 329(4), 115(2) ಸಹಿತ 3(5) ಹಾಗೂ ಬಾಲಾಪರಾಧ ನ್ಯಾಯ ಕಾಯ್ದೆ-2015ರ ಕಲಂ 75ರಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕರಗಿನಕೊಪ್ಪದ ಈ ವಸತಿ ಶಾಲೆ ಇದೇ ಮೊದಲ ಬಾರಿಗೆ ಸುದ್ದಿಯಾಗುತ್ತಿರುವುದಿಲ್ಲ. ಕೆಲವೇ ದಿನಗಳ ಹಿಂದೆ ಶಾಲೆಯ ತರಗತಿ ಕೊಠಡಿಯಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದರಿಂದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ ಘಟನೆ ನಡೆದು. ಹಲವಾರು ವಿದ್ಯಾರ್ಥಿಗಳು ಗಾಯಗೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ಘಟನೆ ಕುರಿತು ಹಿರಿಯ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡದೇ, ಆಂಬುಲೆನ್ಸ್ ಬಳಸುವ ಬದಲು ಆಟೋದಲ್ಲಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಸುದ್ದಿ ಆಗಿತ್ತು.
ಈ ಘಟನೆ ಬಳಿಕ ಆತಂಕಗೊಂಡ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಈ ವಸತಿ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾಯಿಸಿದ್ದರು. ಸತತವಾಗಿ ಒಂದಲ್ಲೊಂದು ಕಾರಣಕ್ಕೆ ಈ ವಸತಿ ಶಾಲೆ ಸುದ್ದಿಯಾಗುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಪಾಲಕರು ಕಾಲೇಜಿಗೆ ಬಂದು ಪೊಲೀಸ್ ಠಾಣೆಯ ಮೆಟ್ಟಿಲೇರುವ ಮಟ್ಟಕ್ಕೆ ಬೆಳೆಯಲು ಕಾರಣವೇನು? ವಸತಿ ನಿಲಯದ ಮೇಲ್ವಿಚಾರಣೆ, ಆಡಳಿತಾತ್ಮಕ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ನಡುವೆ ಉಂಟಾಗುತ್ತಿರುವ ಸಮಸ್ಯೆಗಳ ಮೂಲ ಕಾರಣಗಳ ಕುರಿತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಪ್ರಕರಣದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಲೇ ಹೊರಬರಬೇಕಿದ್ದು, ತನಿಖೆಯ ಬಳಿಕವೇ ಘಟನೆಯ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.




