ಸಮುದಾಯ ಬಾನುಲಿ ಕೇಂದ್ರಗಳ ಕರ್ನಾಟಕ ಶಾಖೆಯ 2026–2029ರ ಅವಧಿಗೆ (ಮೂರು ವರ್ಷ) ನೂತನ ಕಾರ್ಯಕಾರಿ ಸಮಿತಿ ಅವಿರೋಧವಾಗಿ ಆಯ್ಕೆಯಾಗಿದೆ. ರೇಡಿಯೋ ಶಿವಮೊಗ್ಗದ ಗುರುಪ್ರಸಾದ್ ಅಧ್ಯಕ್ಷರಾಗಿ, ಕೆಎಲ್ಇ ಧ್ವನಿ (ಹುಬ್ಬಳ್ಳಿ)ಯ ರವೀಂದ್ರ ಕವಠೇಕರ್ ಕಾರ್ಯದರ್ಶಿಯಾಗಿ ಹಾಗೂ ರೇಡಿಯೋ ಸಿದ್ಧಾರ್ಥ, ತುಮಕೂರಿನ ಡಾ. ಬಿ.ಟಿ. ಮುದ್ದೇಶ್ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ರೇಡಿಯೋ ಶಿವಮೊಗ್ಗದ ಜಿ.ಎಲ್. ಜನಾರ್ಧನ ಅವರನ್ನು ಸಮುದಾಯ ಬಾನುಲಿ ಕೇಂದ್ರಗಳ ರಾಷ್ಟ್ರೀಯ ಸಮಿತಿಯ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ತುಮಕೂರು ನಗರದ ಎಸ್ಎಸ್ಐಟಿ ಕ್ಯಾಂಪಸ್ನ ಪಿಜಿ ಸೆಮಿನಾರ್ ಸಭಾಂಗಣದಲ್ಲಿ ರೇಡಿಯೋ ಸಿದ್ಧಾರ್ಥ 90.8 ಸಿಆರ್ಎಸ್ ಹಾಗೂ ಸಮುದಾಯ ರೇಡಿಯೋ ಸಂಘ–ಕರ್ನಾಟಕ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ “ರೇಡಿಯೋ ಆಲಿಸುವಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಕುರಿತು” ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
ನಿರ್ಗಮಿತ ಅಧ್ಯಕ್ಷೆ ಡಾ. ರಶ್ಮಿ ಅಮ್ಮೆಂಬಳ ಮಾತನಾಡಿ, ಕಳೆದ ಅವಧಿಯಲ್ಲಿ ಸಂಘಕ್ಕೆ ನೀಡಿದ ಸಹಕಾರಕ್ಕಾಗಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ನೂತನ ಸಮಿತಿ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿ, ತಮ್ಮ ಸಂಪೂರ್ಣ ಸಹಕಾರ ಮುಂದುವರಿಸುವುದಾಗಿ ತಿಳಿಸಿದರು.
ಸಮುದಾಯ ಬಾನುಲಿ ಕೇಂದ್ರಗಳ ದಕ್ಷಿಣ ವಲಯದ ಜಂಟಿ ಕಾರ್ಯದರ್ಶಿ ಶಿವಶಂಕರ್ ಮಾತನಾಡಿ, ಕರ್ನಾಟಕದಲ್ಲಿ ಸಮುದಾಯ ರೇಡಿಯೋ ಚಳವಳಿಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹೊಸ ಸಮಿತಿ ಪರಿಣಾಮಕಾರಿ ಕೆಲಸ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಹಿಂದಿನ ಸಮಿತಿಯು ಸಂಘಕ್ಕೆ ಉತ್ತಮ ನೆಲೆ ಮತ್ತು ಗೌರವ ತಂದುಕೊಟ್ಟಿದೆ. ಆ ಪರಂಪರೆಯನ್ನು ಮುಂದುವರಿಸಿಕೊಂಡು ರಾಜ್ಯದ ಸಮುದಾಯ ರೇಡಿಯೋ ಕೇಂದ್ರಗಳ ಸಮಗ್ರ ಅಭಿವೃದ್ಧಿ, ಪ್ರಸಾರದ ಗುಣಮಟ್ಟ ವೃದ್ಧಿ ಹಾಗೂ ಪರಸ್ಪರ ಸಹಕಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು. ಶ್ರೋತೃಗಳ ವಿಶ್ವಾಸ ಉಳಿಸಿಕೊಂಡು ಸಮುದಾಯ ರೇಡಿಯೋ ಕ್ಷೇತ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗುರು ರೇಣುಕಾ ಪ್ರೊಡಕ್ಷನ್ಸ್ನ ನಟ–ನಿರ್ಮಾಪಕ ನವೀನ್ ಎನ್.ಜಿ. ಪ್ರಸಾರ ಮಾಧ್ಯಮದಲ್ಲಿ ಸಂಕಲನದ ಮಹತ್ವದ ಕುರಿತು ಉಪನ್ಯಾಸ ನೀಡಿ, ಪರಿಣಾಮಕಾರಿ ಪ್ರಸಾರಕ್ಕೆ ಉತ್ತಮ ಸಂಕಲನ ಮತ್ತು ತಾಂತ್ರಿಕ ಕೌಶಲ್ಯಗಳು ಅತ್ಯಗತ್ಯವೆಂದು ತಿಳಿಸಿದರು. ಬಳಿಕ ಪ್ರಾಯೋಗಿಕ ಪ್ರದರ್ಶನದ ಮೂಲಕ ಸಂಕಲನ ಪ್ರಕ್ರಿಯೆಯನ್ನು ವಿವರಿಸಿದರು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಗುರುಪ್ರಸಾದ್ (ರೇಡಿಯೋ ಶಿವಮೊಗ್ಗ)
ಉಪಾಧ್ಯಕ್ಷರು: ವಿ.ಕೆ. ಕಡಬ (ರೇಡಿಯೋ ನಿನಾದ, ಉಜಿರೆ)
ಗೌರವಾಧ್ಯಕ್ಷರು: ಡಾ. ಬಿ.ಟಿ. ಮುದ್ದೇಶ್ (ರೇಡಿಯೋ ಸಿದ್ಧಾರ್ಥ, ತುಮಕೂರು)
ಕಾರ್ಯದರ್ಶಿ: ರವೀಂದ್ರ ಕವಠೇಕರ್ (ಕೆಎಲ್ಇ ಧ್ವನಿ 90.4, ಹುಬ್ಬಳ್ಳಿ)
ಜಂಟಿ ಕಾರ್ಯದರ್ಶಿ: ಡಾ. ಲಲಿತಾ ಅಸುತಿ (ಸಹಕಾರ ರೇಡಿಯೋ, ಗದಗ)
ಖಜಾಂಚಿ: ಅಭಿಷೇಕ್ (ರೇಡಿಯೋ ಸಾರಂಗ್, ಮಂಗಳೂರು)
ಸಲಹಾ ಸಮಿತಿಗೆ ಮಂಜುನಾಥ್, ಡಾ. ನಾಗೇಶ್, ರಾಜು ಹಾಗೂ ಡಾ. ಸುರೇಖಾ ಸಂಕನಗೌಡರ್ ಆಯ್ಕೆಯಾಗಿದ್ದು, ರಾಷ್ಟ್ರೀಯ ಸಮಿತಿಗೆ ಜಿ.ಎಲ್. ಜನಾರ್ಧನ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಡಾ. ಜ್ಯೋತಿ ಸಿ., ಶ್ವೇತಾ ಎಂ.ಪಿ., ಗೌತಮ್ ಎ.ವಿ., ರವಿಕುಮಾರ್ ಸಿ.ಎಚ್., ಹರೀಶ್ ಎನ್. ಸೇರಿದಂತೆ ರಾಜ್ಯದ ವಿವಿಧ ಸಮುದಾಯ ಬಾನುಲಿ ಕೇಂದ್ರಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.




