ಹರಿಯಾಣದ ರೋಟಕ್‌ನಲ್ಲಿ ನಡೆಯುತ್ತಿರುವ ಯು-23 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಿದ್ದಿ ಸಮುದಾಯದ ಇಬ್ಬರು ಯುವತಿಯರು ಪದಕ ಗೆದ್ದು ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.
ಜತಕಾ ಹೊಸೂರ ಗ್ರಾಮದ ಶಾಲಿನಾ ಸಿದ್ಧಿ ಅವರು 55 ಕೆಜಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಪಡೆದರೆ, ಗರಡೊಳ್ಳಿವಾಡಾ ಗ್ರಾಮದ ಪ್ರಿನ್ಸಿಟಾ ಸಿದ್ಧಿ ಅವರು 62 ಕೆಜಿ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ವಾಣಿಜ್ಯ ಉದ್ದೇಶಕ್ಕೆ ಗೃಹಬಳಕೆಯ LPG ಸಿಲಿಂಡರ್ ಬಳಕೆ ನಿಷೇಧ: ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ
ರಾಷ್ಟ್ರಮಟ್ಟದ ಈ ಸಾಧನೆಯ ಮೂಲಕ ಇಬ್ಬರು ಕ್ರೀಡಾಪಟುಗಳು ಪ್ರತಿಭೆ, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಗೆಲುವು ಸಾಧಿಸ ಬಹುದು ಎಂದು ಸಾಬೀತುಪಡಿಸಿದ್ದಾರೆ. ಇವರ ಯಶಸ್ಸು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಗೌರವ ತಂದುಕೊಟ್ಟಿದೆ.
ಗ್ರಾಮೀಣ ಪ್ರದೇಶದ ಪ್ರತಿಭೆಗಳು ಸೂಕ್ತ ಅವಕಾಶ ಮತ್ತು ನಿರಂತರ ತರಬೇತಿ ದೊರೆತರೆ ರಾಷ್ಟ್ರಮಟ್ಟದಲ್ಲಿಯೂ ಸಾಧನೆ ಮಾಡಬಹುದು ಎಂಬುದಕ್ಕೆ ಈ ಇಬ್ಬರು ಯುವತಿಯರ ಸಾಧನೆ ಉತ್ತಮ ಉದಾಹರಣೆಯಾಗಿದೆ.
ಇವರ ಸಾಧನೆಯು ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಹೊಸ ಉತ್ಸಾಹ ಮತ್ತು ಪ್ರೇರಣೆಯಾಗಿದೆ. ಈ ಯಶಸ್ಸಿನ ಹಿಂದೆ ಶ್ರಮಿಸಿದ ತರಬೇತುದಾರರು, ಪೋಷಕರು ಹಾಗೂ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಇನ್ನಷ್ಟು ಸಾಧನೆ ಮಾಡಿ ಕರ್ನಾಟಕ ಮತ್ತು ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಜಿಲ್ಲೆಯ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.




