ಉಳಿದ ಬೆಳೆಗಳಿಗೆ ಹೇಗೆ ಬೆಳೆ ವಿಮೆ ತುಂಬಲು ಅವಕಾಶ ಇದೆಯೋ ಅದೇ ರೀತಿ ಕಬ್ಬಿಗೆ ಬೆಳೆ ವಿಮೆ ತುಂಬುವ ಅವಕಾಶವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಕಲ್ಪಿಸಿ, ಕಬ್ಬು ಬೆಳೆಗಾರರ ಹಿತ ಕಾಪಾಡಲು ಮುಂದಾಗ ಮುಂದಾಗಬೇಕು ಎಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮನವಿ ಮಾಡಿದ್ದಾರೆ
ಹಾವೇರಿಯಲ್ಲಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಅವರು, “ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಅತಿ ಹೆಚ್ಚು ಬಿಸಿಲು ಬೀಳುತ್ತದೆ ಭೂಮಿಯಲ್ಲಿ ತೇವಾಂಶದ ಕೊರತೆ ಇದೆ ಮಳೆ ಇಲ್ಲ, ಬೆಳೆಗಳು ಒಣಗುತ್ತಿವೆ. ಮಧ್ಯಾಹ್ನದ ಬಿಸಿಲಿನಲ್ಲಿ ಹೊಲಕ್ಕೆ ಹೋದರೆ ಬತ್ತಿರುತ್ತವ ಬೆಳೆಗಳನ್ನು ನೋಡಿ ರೈತರಿಗೆ ಆಗಾತ ಉಂಟಾಗುತ್ತಿದೆ. ಸಾಲದ ಸುಳಿವಿನಲ್ಲಿ ಸಿಲುಕಿಕೊಂಡ ರೈತನ ಪರಿಸ್ಥಿತಿ ಅತಂತ್ರವಾಗಿದೆ. ಅದಕ್ಕಾಗಿ ರೈತರ ಬೆಳೆ ಸಾಲವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿಕೊಂಡು ಸಂಪೂರ್ಣವಾಗಿ ಮನ್ನಾ ಮಾಡಬೇಕು” ಎಂದು ತಿಳಿಸಿದ್ದಾರೆ.
“ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿದ್ದು, ಒಟ್ಟು ಇಪ್ಪತ್ತೈದು ಲಕ್ಷಕ್ಕಿಂತ ಹೆಚ್ಚು ಟನ್ ಕಬ್ಬನ್ನು ರೈತರು ಹಾವೇರಿ ಜಿಲ್ಲೆಯಲ್ಲಿ ಬೆಳೆಯುತ್ತಿದ್ದಾರೆ. ಈ ವರ್ಷ ಮುಂಗಾರಿನಿಂದಲೂ ಮಳೆ ಇಲ್ಲದೆ ಬೆಳೆಗಳು ಕುಂಠಿತಗೊಂಡಿವೆ. ಬೇಸಿಗೆಯಲ್ಲಿ ಬೋರ್ವೆಲ್ ನೀರು ಕಡಿಮೆಯಾಗಿ ಸಮಸ್ಯೆ ಆಗಿದೆ. ಈಗ ಮಳೆಯಾಗದೆ ಇರುವದರಿಂದ ಇಳುವರಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಎರಡು ವರ್ಷದಿಂದ ರೈತ ಅತಿವೃಷ್ಠಿ, ಅನಾವೃಷ್ಟಿಯಲ್ಲಿ ನಲುಗಿ ಬೆಂದು ಹೋಗಿದ್ದಾನೆ. ಸಿಹಿ ಕೊಡುವ ರೈತರಿಗೆ ಸರ್ಕಾರಗಳು ಕಹಿ ಕೊಡಬಾರದು” ಎಂದು ತಿಳಿಸಿದ್ದಾರೆ.
“ಹಾಗಾಗಿ ಕಬ್ಬು ಬೆಳೆ ಬೆಳೆಯಲು ದುಬಾರಿ ವೆಚ್ಚ ತಗುಲುತ್ತಿದೆ. ಗೊಬ್ಬರ ದುಬಾರಿಯಾಗಿದೆ. ಕೂಲಿಕಾರರ ಸಂಬಳ ಹೆಚ್ಚಾಗಿದೆ. ರೈತರಿಗೆ ಕಬ್ಬಿನ ದರ ಕಡಿಮೆಯಾಗುತ್ತಿದೆ. ಈ ವರ್ಷ ಪ್ರತಿ ಟನ್ ಕಬ್ಬಿಗೆ ನಾಲ್ಕುವರೆ ಸಾವಿರ ದರ ನಿಗದಿ ಮಾಡಬೇಕು. ಜೊತೆಗೆ ಕಬ್ಬಿಗು ಬೆಳೆ ವಿಮೆ ತುಂಬುವ ಅವಕಾಶ ಮಾಡಿಕೊಡಬೇಕು” ಎಂದು ತಿಳಿಸಿದ್ದಾರೆ.




