4ನೇ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನ ಅಕ್ಟೋಬರ್ 26, 27 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಕೇಂದ್ರೀಯ ಕಾರ್ಮಿಕ ಸಂಘಟನೆ ಎಐಯುಟಿಯುಸಿ ಅಧ್ಯಕ್ಷ ಕೆ ಸೋಮಶೇಖರ್ ಮಾಹಿತಿ ನೀಡಿದರು.
ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, “ಕೇಂದ್ರದಲ್ಲಿ ದೀರ್ಘಕಾಲ ಆಳಿದ ಕಾಂಗ್ರೆಸ್ ಹಾಗೂ ಪ್ರಸಕ್ತ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳು ದೇಶದ ಸಂಪತ್ತು ಹಾಗೂ ಕಾರ್ಮಿಕರ ಶ್ರಮಶಕ್ತಿಯನ್ನು ಲೂಟಿ ಮಾಡಲು ಅನುವು ಮಾಡಿಕೊಟ್ಟಿವೆ. ಜನರ ತೆರಿಗೆ ಹಣ ಹಾಗೂ ಕಾರ್ಮಿಕರ ಶ್ರಮದಿಂದ ಕಟ್ಟಿದ ರೈಲ್ವೆ, ಬ್ಯಾಂಕು-ವಿಮೆ, ಉಕ್ಕು, ಕಲ್ಲಿದ್ದಲು, ವಿದ್ಯುತ್ ಉತ್ಪಾದನೆ ಇತ್ಯಾದಿ ಸಾರ್ವಜನಿಕ ಉದ್ಧಿಮೆಗಳನ್ನು ಟಾಟಾ, ಅಂಬಾನಿ ಮತ್ತು ಅದಾನಿಯಂತಹ ಕಾರ್ಪೋರೇಟ್ ಮನೆತನಗಳಿಗೆ ಧಾರೆಯೆರೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಗ್ರ ನರಸಿಂಹೇಗೌಡ ಮಾತನಾಡಿ, “ಕಾರ್ಮಿಕರು ಅಪಾರ ತ್ಯಾಗ ಬಲಿದಾನಗಳಿಂದ ಗಳಿಸಿದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರವು ಕಾರ್ಮಿಕ ಕಾಯ್ದೆಗಳನ್ನು, ಮಾಲೀಕರ ಪರವಾಗಿ ತಿದ್ದುಪಡಿ ಮಾಡಿ 4 ಲೇಬರ್ ಕೋಡ್ ( ಕಾರ್ಮಿಕ ಸಂಹಿತೆ)ಗಳನ್ನು ರೂಪಿಸಿದೆ. ಕರ್ನಾಟಕದಲ್ಲೂ ಹಿಂದಿನ ಬಿಜೆಪಿ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದು ದುಡಿಮೆಯ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ಏರಿಸಿತು ಹಾಗೂ ಮಹಿಳೆಯರಿಗೆ ರಾತ್ರಿ ಪಾಳಿ ಜಾರಿಗೆ ತಂದಿತ್ತು” ಎಂದು ಹೇಳಿದರು.

ಗೌರವಾಧ್ಯಕ್ಷ ಡಾ ಕೆ ಕಾಳ ಚನ್ನೇಗೌಡ ಮಾತನಾಡಿ, “ಐಟಿ ಬಿಟಿ ಕ್ಷೇತ್ರದ ಉದ್ಯೋಗಿಗಳಿಗೆ 14 ಗಂಟೆ ದುಡಿಮೆ ಅವಧಿ ಜಾರಿಗೆ ತರುವ ನಿಟ್ಟಿನಲ್ಲಿ, ಕಾರ್ಮಿಕ ಇಲಾಖೆಯ ಮೂಲಕ ಅಭಿಪ್ರಾಯ ಸಂಗ್ರಹಿಸಲು ಹೊರಟಿದೆ. ಇದು ನಿಜಕ್ಕೂ ಖಂಡನೀಯ ನಡೆ. ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡುವುದಾಗಿ ಭರವಸೆ ನೀಡಿಯೂ, ಇದುವರೆಗೂ ಜಾರಿ ಮಾಡದೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಖಂಡನೀಯ” ಎಂದರು.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಗೂ ಖಾಸಗಿ ವಲಯದಲ್ಲಿ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಂಡಿರುವ ಕಾರ್ಮಿಕರು ಕ್ರೂರ ಶೋಷಣೆಗೆ ಒಳಗಾಗುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮತ್ತು ಬಿಸಿ ಊಟ ಕಾರ್ಯಕರ್ತೆಯರಿಗೆ ಕನಿಷ್ಠ ವೇತನವೂ ನೀಡುತ್ತಿಲ್ಲ. ಗಿಗ್ ಮತ್ತು ಪ್ಲಾಟ್ ಫಾರಂ ಕಾರ್ಮಿಕರಿಗೆ ಯಾವುದೇ ಭದ್ರತೆಗಳಿಲ್ಲ. ಬೆಲೆ ಏರಿಕೆ, ಹಣದುಬ್ಬರಗಳಿಂದ ತತ್ತರಿಸುವ ದುಡಿಯುವ ಜನರ ಜೀವನ ಸಂಕಟಮಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯದರ್ಶಿ ಕೆ ಉಮಾ ಮಾತನಾಡಿ, ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಕುಟುಂಬ ನಿರ್ವಹಣೆಗೆ ಬೇಕಿರುವ ಕನಿಷ್ಠ ವೇತನ ರೂ 35 ಸಾವಿರ ನಿಗದಿಪಡಿಸುವ ಬಗ್ಗೆ ಸರ್ಕಾರ ಮೀನಮೇಷ ಎಣಿಸುತ್ತಿದೆ. ಪ್ರತಿಯೊಬ್ಬ ಕಾರ್ಮಿಕನಿಗೂ ಜಾರಿಯಾಗಬೇಕಾಗಿದ್ದ ಇಎಸ್‌ಐ ಪಿಎಫ್ ಸೌಲಭ್ಯವನ್ನು ಜಾರಿ ಮಾಡದೇ ವಂಚಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ವಿಜಯಪುರ | ಬಿಜೆಪಿ ಹಿಂದೆಗೆದ ಪ್ರಕರಣಗಳ ಬಗ್ಗೆ ಸಿ ಟಿ ರವಿ ಯಾಕೆ ಮಾತನಾಡಲ್ಲ? ಎಂ.ಬಿ. ಪಾಟೀಲ್
26, 27 ರಂದು ನಡೆಯಲಿರುವ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೈಗಾರಿಕಾ ಕಾರ್ಮಿಕರು, ವೈದ್ಯಕೀಯ ಕಾಲೇಜು, ಸರ್ಕಾರಿ ಹಾಸ್ಟೆಲ್, ವಿಶ್ವ ವಿದ್ಯಾಲಯ ಹಾಗೂ ಇನ್ನಿತರ ಕ್ಷೇತ್ರಗಳ ಗುತ್ತಿಗೆ ಕಾರ್ಮಿಕರು, ಗಣಿ ಕಾರ್ಮಿಕರು, ವಿದ್ಯುತ್ ಕ್ಷೇತ್ರದ ನೌಕರರು, ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ನೌಕರರು, ಕಟ್ಟಡ ಕಾರ್ಮಿಕರು, ಇನ್ನಿತರ ಕ್ಷೇತ್ರಗಳ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಂ ಉಮಾದೇವಿ,ಜಿಲ್ಲಾಧ್ಯಕ್ಷ ಕಾ ವಿ ಯಶೋಧರ್, ಕಾರ್ಯದರ್ಶಿ ಕಾ ಚಂದ್ರಶೇಖರ್ ಮೇಟಿ ಹಾಗೂ ಇನ್ನಿತರರು ಇದ್ದರು.
