ಬೆಳಗಾವಿಯಲ್ಲಿ ಗುತ್ತಿಗೆದಾರರು ನನ್ನ ವಿರುದ್ಧ ಪ್ರತಿಭಟಿಸಿರುವುದು ಗಮನಕ್ಕೆ ಬಂದಿಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬಿ ಎಸ್ ಸುರೇಶ್ ಪ್ರತಿಕ್ರಿಯಿಸಿದರು.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದರು. “ಗುತ್ತಿಗೆದಾರರು ನೇರವಾಗಿ ನನ್ನ ಹೆಸರು ಹೇಳಿದ್ದಾರೆಯೇ, ಗುತ್ತಿಗೆ ವಿಚಾರಕ್ಕೂ ನನಗೂ ಏನು ಸಂಬಂಧ’ ಎಂದು ಪ್ರಶ್ನಿಸಿದರು.
“ಇ– ಟೆಂಡರ್ ಮೂಲಕ ಕಾಮಗಾರಿಗಳನ್ನು ನೀಡಲಾಗುತ್ತದೆ. ಇದು ಪ್ರಕ್ರಿಯೆ, ಅದರಲ್ಲಿ ನಮ್ಮವರನ್ನು ಹೇಗೆ ಸೇರಿಸಲು ಸಾಧ್ಯ? ಅಷ್ಟಕ್ಕೂ ನಾವಿನ್ನೂ ಟೆಂಡರ್ ಪ್ರಕ್ರಿಯೆಯನ್ನೇ ನಡೆಸಿಲ್ಲ. ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಭಾಗವಹಿಸಿದವರಲ್ಲಿ ಹೆಚ್ಚು ಕೋಟ್ ಮಾಡಿದವರಿಗೆ ಟೆಂಡರ್ ಸಿಗುತ್ತದೆ. ಶಕ್ತಿವಂತ ಪಡೆದುಕೊಳ್ಳುತ್ತಾನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸರ್ಕಾರಿ ಆಸ್ಪತ್ರೆ ವೈದ್ಯ ವಿರುದ್ಧ ನ್ಯಾಯಾಧೀಶೆ ದೂರು; ಪ್ರಕರಣ ದಾಖಲು
ʼಕಾಂಗ್ರೆಸ್ ಪಕ್ಷವು ಎಲ್ಲಿಯೇ ಸರ್ಕಾರ ರಚಿಸಿದರೂ ಭ್ರಷ್ಟಾಚಾರದಲ್ಲಿ ತೊಡಗುತ್ತದೆʼ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ಪ್ರಧಾನಿ ಹೇಳಿಕೆಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ. ಆದರೆ, ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹರೇ ಬಿಜೆಪಿಯವರು. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದೇ ಆ ಪಕ್ಷದವರು. ಅವರು ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಎಂದು ಇಡೀ ರಾಜ್ಯದ ಜನರೇ ಹೇಳುತ್ತಿದ್ದಾರೆ” ಎಂದರು.