ಸ್ವಾತಂತ್ರ್ಯ ಭಾರತದಲ್ಲಿ ಇಂದಿನ ಲೋಕಸಭಾ ಚುನಾವಣೆ ಐತಿಹಾಸಿಕವಾದದ್ದು ಯಾಕೆ ಅಂದ್ರೆ ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದೊದಗಿದೆ ಎಂದು ಸುಹೇಲ್ ಅಹಮದ್ ಹೇಳಿದರು.
ಮೈಸೂರಿನ ಜಮಾ-ಅತೆ-ಇಸ್ಲಾಮೀ ಹಿಂದ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇ ದಕ್ಕೆಯಾಗಿದೆ. ಅಂಬೇಡ್ಕರ್ ಅವರ ಆಶಯ ಮರೆತ ಸರ್ಕಾರದ ದುರಾಡಳಿತ, ಸರ್ವಾಧಿಕಾರ ಧೋರಣೆ ಜನರನ್ನು ಹೈರಾಣು ಮಾಡಿದೆ. ಜನರ ಬದುಕನ್ನು ಜರ್ಜರಿತವನ್ನಾಗಿಸಿದ ಈ ಸರ್ಕಾರವನ್ನು ಕಿತ್ತೊಗೆಯುವ ಕಾಲ ಬಂದಿದೆ ಎಂದರು.
ಮೈಸೂರು-ಕೊಡಗು ಸಂಯೋಜಕ ಮೋಹನ್ ಮೈಸೂರು ಮಾತನಾಡಿ, ನಮ್ಮೆಲ್ಲರ ಅಸ್ಮಿತೆ, ಸಂವಿಧಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಡಿನ ಸಾಕ್ಷಿ ಪ್ರಜ್ಞೆ ದೇವನೂರು ಮಹಾದೇವ, ಸಾಹಿತಿಗಳಾದ ಪುರುಷೋತ್ತಮ್ ಬಿಳಿಮಲೆ, ರಹಮತ್ ತರೀಕೆರೆ, ದು. ಸರಸ್ವತಿ, ತಾರ ರಾವ್ ಸೇರಿದಂತೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರೆಕೊಟ್ಟ ಆಂದೋಲನವೇ ʼಎದ್ದೇಳು ಕರ್ನಾಟಕʼ ಎಂದರು.
ಎದ್ದೇಳು ಕರ್ನಾಟಕ ಸಂಘಟನೆ ಅಲ್ಲ ಅದೊಂದು ಆಂದೋಲನ. ಇದರ ಭಾಗವಾಗಿ ನಾಡಿನ ಹಲವು ಸಂಘಟನೆಗಳು ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳು ಸೇರಿ 103 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಿ 75 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ನೇರ ಕಾರಣವಾಗಿದೆ ಎಂದರು.
ಇಂದಿಗೂ ಸಹ ರೈತ ವಿರೋಧಿ, ಜನ ವಿರೋಧಿ, ಸಂವಿಧಾನ ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ನಮ್ಮೆಲ್ಲರ ಅಸ್ಮಿತೆಗಾಗಿ ರಾಜ್ಯದ ಉದ್ದಗಲಕ್ಕೂ ಕೆಲಸ ಮಾಡುತ್ತಿದ್ದು ಕೋಮುವಾದಿ ಶಕ್ತಿಗಳನ್ನು ಮಣಿಸುವಲ್ಲಿ ಕೆಲಸ ಮಾಡುತ್ತಿದೆ ಎಂದರು.
ʼಕೋಮುವಾದಿ ಶಕ್ತಿಯನ್ನು ಸೋಲಿಸಿ,ಸಂವಿಧಾನ ಉಳಿಸಿ’ ಎದ್ದೇಳು ಕರ್ನಾಟಕದ ಆಶಯ. ಇದರ ನಿಟ್ಟಿನಲ್ಲಿ ಮೈಸೂರು-ಕೊಡಗು ಭಾಗವಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದು. ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಸಾಹಿತಿಗಳು, ಚಿಂತಕರು, ಸಂಘಟನೆಗಳ ನೆರವಿಂದ ಕೆಲಸ ಮಾಡಲಾಗುತ್ತಿದೆ ಎಂದರು.
ಜಮಾ-ಅತೆ-ಇಸ್ಲಾಮೀ ಹಿಂದ್ ಯುವ ಮುಖಂಡ ಅಸಾದುಲ್ಲಾ ಮಾತನಾಡಿ, ರಾಷ್ಟ್ರದಲ್ಲಿ ಹತ್ತು ವರ್ಷಗಳಿಂದ ಆಳ್ವಿಕೆ ಮಾಡುತ್ತಿರುವ ಬಿಜೆಪಿಯ ದುರಾಡಳಿತದಲ್ಲಿ ಜನ ನಲುಗಿದ್ದಾರೆ ಇಂತಹ ಕೋಮುವಾದಿ ಶಕ್ತಿಯನ್ನು ಸೋಲಿಸಲು ಎದ್ದೇಳು ಕರ್ನಾಟಕ ಅವಿರತವಾಗಿ ಸಂಘಟಿತವಾಗಿ ಕೆಲಸ ಮಾಡುತ್ತಿದೆ ಎಂದರು.
ದೇಶದಲ್ಲಿ ಬಿಜೆಪಿ ಯಾಕೆ ಸೋಲಿಸಬೇಕು ಅಂದ್ರೆ, ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೊಟ್ಟಿದ್ದ ಭರವಸೆಯನ್ನು ಈಡೇರಿಸಲಿಲ್ಲ. ಅಧಿಕಾರಕ್ಕೆ ಬರುವ ಮುಂಚೆ ಪೆಟ್ರೋಲ್ ಬೆಲೆ ತಗ್ಗಿಸುವುದು, ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದು, ಕಪ್ಪು ಹಣ ವಾಪಸ್ ತರುವುದು, ರೈತರ ಸಾಲ ಮನ್ನಾ ಮಾಡುವಂತಹ ಘೋಷಣೆ ಮಾಡಿ ಯಾವುದನ್ನು ಮಾಡದೆ ಜನರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನುಡಿದಂತೆ ನಡೆದ ಸರ್ಕಾರದ ಧೋರಣೆಯನ್ನು ಖಂಡಿಸಿ ಈ ಭಾರಿ ಕೋಮುವಾದಿ ಶಕ್ತಿಯನ್ನು ಮಣಿಸಬೇಕು ಬಿಜೆಪಿ ಸರ್ಕಾರ ಪ್ರೀತಿಯಿಂದ ಆಡಳಿತ ಮಾಡಿಲ್ಲ ದ್ವೇಷದ ರಾಜಕಾರಣ ಮಾಡಿದೆ. ಈ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಮಾತ್ ಹಿರಿಯಖಂಡರಾದ ಖಲೀಲ್ ಉರ್ ರಹಮಾನ್ ವಸೀಂ, ಸ್ಥಾನಿಕ ಅಧ್ಯಕ್ಷರಾದ ಮೊಹಮ್ಮದ್ ಅಸ್ಲಾಂ, ಎದ್ದೇಳು ಕರ್ನಾಟಕ ತಂಡದ ಅಬ್ದುಲ್ ವಾಹಿದ್ ಹಾಗೂ ಅಬ್ದುಲ್ ರಹೀಮ್ ಅಫ್ತಾಬ್ ಉಪಸ್ಥಿತರಿದ್ದರು.
