ಮತದಾರರಿಗೆ ಮತದಾನ ಕೇಂದ್ರಗಳು ಆಕರ್ಷಣೀಯವಾಗಿ ಕಾಣುವಂತೆ ಅವುಗಳನ್ನು ಸಿದ್ಧಪಡಿಸಬೇಕು. ಇಂತಹ ಕ್ರಮಗಳು ಚುನಾವಣೆಯಲ್ಲಿ ಮತದಾನದ ಪ್ರಮಾಣವವನ್ನು ಹೆಚ್ಚು ಮಾಡುತ್ತದೆ” ಎಂದು ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅಧಿಕಾರಿಗಳಿಗೆ ತಿಳಿಸಿದರು.
ಪಂಚಾಯತ್ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ ಚುನಾವಣೆಗೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ, ಅಧಿಕಾರಿಗಳು ಮತಗಟ್ಟೆಗಳನ್ನು ಸುಂದರಗೊಳಿಸಲು ಸಿದ್ಧತೆಗಳನ್ನು ಪ್ರಾರಂಭಿಸಬಹುದು” ಎಂದು ಹೇಳಿದರು.
“ವರ್ಣಚಿತ್ರಗಳು, ರೇಖಾಚಿತ್ರಗಳು, ರಂಗೋಲಿಗಳು, ಮಾವಿನ ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸುವಂತಹ ವಿಶೇಷ ಆಕರ್ಷಣೆಗಳು ಮತದಾನದ ಸಮಯದಲ್ಲಿ ತಮ್ಮ ಮತಗಟ್ಟೆಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ” ಎಂದು ಹೇಳಿದರು.
“ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ್ಯಂತ 2,915 ಮತಗಟ್ಟೆಗಳ ಪೈಕಿ ಗುರುತಿಸಲಾದ ಮೊದಲ ಮೂರು ಮತಗಟ್ಟೆಗಳಿಗೆ ನಗದು ಬಹುಮಾನಗಳನ್ನು ವಿತರಿಸಲಾಗುವುದು” ಎಂದು ಅಧಿಕಾರಿ ಹೇಳಿದರು.
“ಬೂತ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದ್ದರೆ ಅವುಗಳನ್ನು ಗುರುತಿಸಿ ಸಣ್ಣ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು. ಎಲ್ಲ ಬೂತ್‌ಗಳಲ್ಲಿಯೂ ಮೂಲ ಸೌಕರ್ಯ ಒದಗಿಸಬೇಕು” ಎಂದು ಬೂತ್ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ತಮ್ಮ ವ್ಯಾಪ್ತಿಯಲ್ಲಿ ಗುರುತಿಸಲಾದ ಮತಗಟ್ಟೆಗಳನ್ನು ದುರಸ್ತಿ ಮಾಡಲು ವಿಫಲವಾದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಎಚ್ಚರಿಸಿದರು.
“ಎಲ್ಲ ಮತಗಟ್ಟೆ ಅಧಿಕಾರಿಗಳು ದಿನಕ್ಕೆ 14 ರಿಂದ 15 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬೇಕಾಗಿರುವುದರಿಂದ ಗುಣಮಟ್ಟದ ಆಹಾರವನ್ನು ಪೂರೈಸಲು, ಅವರ ಸುರಕ್ಷತೆಗಾಗಿ ಇತರ ಎಲ್ಲ ವ್ಯವಸ್ಥೆಗಳನ್ನು ಮಾಡಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
“ಚುನಾವಣಾ ನೀತಿ ಸಂಹಿತೆ ಘೋಷಣೆಯಾದ 24 ರಿಂದ 72 ಗಂಟೆಗಳ ಒಳಗೆ ಚುನಾವಣೆಗೆ ಸಂಬಂಧಿಸಿದ ಎಲ್ಲ ರಾಜಕೀಯ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ತೆಗೆದುಹಾಕಬೇಕು. ಸರ್ಕಾರ ಪ್ರಾರಂಭಿಸಿದ ಯೋಜನಾ ಕಾರ್ಯಗಳನ್ನು ಮಾತ್ರ ಮುಂದುವರಿಸಲು ಅಧಿಕಾರಿಗಳು ಅನುಮತಿಸಬಹುದು. ಒಬ್ಬ ಅಭ್ಯರ್ಥಿಯು ಚುನಾವಣಾ ವೆಚ್ಚಕ್ಕಾಗಿ ಕೇವಲ ₹95 ಲಕ್ಷ ಮಾತ್ರ ಖರ್ಚು ಮಾಡಲು ಅವಕಾಶವಿದೆ. ಈ ಕುರಿತು ಎಚ್ಚರ ವಹಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಶಕ್ತಿನಗರದ ಪಿಯು ಕಾಲೇಜಿಗಿಲ್ಲ ಸ್ವಂತ ಕಟ್ಟಡ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, “ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸುವಾಗ ವ್ಯಕ್ತಿಯು ತನ್ನ ಜೇಬಿನಲ್ಲಿ ₹50,000ಕ್ಕಿಂತ ಹೆಚ್ಚಿನ ನಗದು ಮೊತ್ತ ಮತ್ತು ₹10,000 ಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಕೊಂಡೊಯ್ಯುವಂತಿಲ್ಲ” ಎಂದು ಅಧಿಕಾರಿಗಳಿಗೆ ಸೂಚಿಸಿದರು.