ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಅಭಿವೃದ್ಧಿ ಮತ್ತು ಸಾಧನೆಗಳ ಬಗ್ಗೆ ಚರ್ಚೆಗೆ ಬಾರದೆ ಸಂಸದ ಪ್ರತಾಪ್ ಸಿಂಹ ತಲೆ ಮರೆಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳ ಪಟ್ಟಿ ಕೊಡುತ್ತೇನೆ. ಅವರು ಚರ್ಚೆಗೆ ಬರಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ಇತ್ತೀಚೆಗೆ ಸಿದ್ದರಾಮಯ್ಯ ಅವರ ಕೊಡುಗೆಗಳ ಬಗ್ಗೆ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದರು. ಅವರ ಪ್ರಶ್ನೆಗೆ ತಿರುಗೇಟು ನೀಡಿದ್ದ ಎಂ ಲಕ್ಷ್ಮಣ್, ‘ಸೆ.6ರಂದು ಪ್ರತಾಪ್ ಸಿಂಹ ಅವರ ಕಚೇರಿಯ ಎದುರೇ ದಾಖಲೆ ಬಿಡುಗಡೆ ಮಾಡುತ್ತೇವೆ’ ಎಂದು ಹೇಳಿದ್ದರು. ಅದರಂತೆ, ಇಂದು ಸಂಸದರ ಕಚೇರಿಗೆ ಲಕ್ಷ್ಮಣ್ ಮತ್ತು ಕಾಂಗ್ರೆಸ್ ಮುಖಂಡರು ದಾಖಲೆ ಸಮೇತ ತೆರಳಿದ್ದು, ಅವರನ್ನು ಪೊಲೀಸರು ಗೇಟ್ನಲ್ಲಿಯೇ ತಡೆದಿದ್ದಾರೆ.
ಕಾಂಗ್ರೆಸ್ ಮುಖಂಡರು ಕಚೇರಿ ಒಳ ಹೋಗಲು ಯತ್ನಿಸಿದರೂ, ಪೊಲೀಸರು ಅವರನ್ನು ಬಿಡಲಿಲ್ಲ. ಬಳಿಕ, ಗೇಟ್ನಲ್ಲಿ ಟೇಬಲ್ ಹಾಕಿ ಕುಳಿತ ಲಕ್ಷ್ಮಣ್, “ಕೇಂದ್ರದಲ್ಲಿ ಪ್ರತಾಪ್ ಸಿಂಹ ಅವರದ್ದೇ ಸರ್ಕಾರವಿದೆ. ರಾಜ್ಯದಲ್ಲಿಯೂ ಹಿಂದೆ ಅವರದ್ದೇ ಸರ್ಕಾರವಿತ್ತು. ಆದರೂ, ಮೈಸೂರಿಗೆ ಪ್ರತಾಪ್ ಸಿಂಹ ನಯಾಪೈಸೆ ಕೆಲಸ ಮಾಡಿಲ್ಲ. ರಿಂಗ್ ರೋಡ್ ಆಗಿದ್ದು ಎಡಿಬಿ ಸಾಲದಲ್ಲಿ. ಕಾರ್ಪೊರೇಟರ್ ಮಾಡಿದ್ದನ್ನು ನಾನು ಮಾಡಿದ್ದೇನೆ ಅಂತ ಪ್ರತಾಪ್ ಸಿಂಹ ಹೇಳಿಕೊಳ್ಳುತ್ತಾರೆ. ಮೈಸೂರಿಗೆ ಸಂಸದರಾಗಿ ಪ್ರತಾಪ್ ಸಿಂಹ ಏನು ಕೊಟ್ಟಿದ್ದಾರೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಂಸದರ ಕಚೇರಿಗೆ ದಾಖಲೆಗಳನ್ನು ಕೊಟ್ಟಿದ್ದೇವೆ. ಚರ್ಚೆಗೆ ಸಂಸದ ಪ್ರತಾಪ್ ಸಿಂಹ ನಿಗದಿಪಡಿಸುವ ಜಾಗಕ್ಕೆ ತೆರಳಲು ನಾವು ಸಿದ್ದರಿದ್ದೇವೆ. ಸಂಸದರ ಜಾಗ ನಿಗದಿ ಮಾಡಿ, ಚರ್ಚೆಗೆ ಬರಲಿ” ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ಹೇಳಿದ್ದಾರೆ.