ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ ರೌಡಿಶೀಟರ್ ಇಂಗಲಕುಪ್ಪೆ ಕೃಷ್ಣೇಗೌಡ ಗಡಿಪಾರು ಮಾಡುವಂತೆ ಆಗ್ರಹಿಸಿ ಕಾಯಕರ್ತರು ಪ್ರತಿಭಟನೆ ನಡೆಸಿದರು.
ಡಿ.6ರಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು, ಈಗಾಗಲೇ ಆರೋಪಿ ಇಂಗಲಕುಪ್ಪೆ ಕೃಷ್ಣೇಗೌಡ ಮೇಲೆ ಸರಿ ಸುಮಾರು 25 ಕ್ರಿಮಿನಲ್ ಕೇಸ್‌ಗಳು ಮೈಸೂರು, ಮಂಡ್ಯ, ಚಾಮರಾಜ ನಗರದಲ್ಲಿ ದಾಖಲಾಗಿವೆ. ಅದರಲ್ಲೂ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಈತನನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ರೈತ ಸಂಘಕ್ಕೆ ತನ್ನದೇ ಆದ ಬದ್ಧತೆಗಳಿದ್ದು, ಪ್ರೊ. ನಂಜುಂಡಸ್ವಾಮಿ ಅವರಿಂದ ಪ್ರಭಾವಿತರಾಗಿ, ನಾನು ಹಾಗೂ ಬಡಗಲಪುರ ನಾಗೇಂದ್ರ ವಿದ್ಯಾರ್ಥಿ ದೆಸೆಯಲ್ಲಿಯೇ ರೈತ ಸಂಘದ ಹೋರಾಟಕ್ಕೆ ದುಮುಕಿದವರು. ಅದರಲ್ಲಿ ವಕೀಲರಾಗಿ ಸರಿ ಸುಮಾರು 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ರೈತನ ಮಕ್ಕಳು, ರೈತರು ಮನೆ ಕಟ್ಟುವುದು, ಕಾರಿನಲ್ಲಿ ಓಡಾಡಿದರೆ ಅದು ತಪ್ಪೇ? ರೈತನ ಮಕ್ಕಳು ಹರಕಲು ಚಡ್ಡಿಯಲ್ಲಿ ಓಡಾಡಿಕೊಂಡು ಇರಬೇಕು ಅನ್ನುವುದು ಸರಿಯೇ! ಹಸಿರು ಶಾಲು ಹಾಕಿಕೊಂಡು ಜನರನ್ನು ವಂಚಿಸುತ್ತಿರುವ ಇಂಗಲಕುಪ್ಪೆ ಕೃಷ್ಣೇಗೌಡಗೆ ಸರಿಯಾದ ಬುದ್ಧಿ ಕಲಿಸಲಾಗುತ್ತದೆ.
ಕರ್ನಾಟಕ ರಾಜ್ಯ ರೈತ ಸಂಘಕ್ಕೂ ಈತನಿಗೂ ಯಾವುದೇ ತರಹದ ಸಂಬಂಧವಿಲ್ಲ. ಸ್ವಯಂ ಘೋಷಿಸಿಕೊಂಡು ರೈತ ಮುಖಂಡನ ಸೋಗಿನಲ್ಲಿ ಮಾಡಬಾರದ್ದನ್ನು ಮಾಡುತ್ತಿರುವ ಕ್ರಿಮಿನಲ್. ಇಂತಹ ವ್ಯಕ್ತಿಯನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ದಿನ.ಕಾಮ್ ಜೊತೆ ಮಾತನಾಡಿದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಹಸಿರು ಶಾಲು ಶಾಂತಿಯ ಸಂಕೇತ. ತನ್ನದೇ ಆದ ಮಹತ್ವ ಹೊಂದಿದೆ. ಹೋರಾಟದ ಹಾದಿಯಲ್ಲಿ ಬಂದವರು ನಾವು. ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದಿದ್ದೇವೆ ವಿನಃ ಆಸೆ ಆಕಾಂಕ್ಷೆಗಳಿಗೆ ಎಂದಿಗೂ ಸಹ ಬಲಿಯಾದವರಲ್ಲ.
ಕ್ರಿಮಿನಲ್ ಹಿನ್ನಲೆಯ ಇಂಗಲಕುಪ್ಪೆ ಕೃಷ್ಣೇಗೌಡ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ದುಂಬಾಲು ಬಿದ್ದಿದ್ದ. ಆದರೆ, ವ್ಯಕ್ತಿಯ ಬಗ್ಗೆ ಅರಿವಿದ್ದ ಕಾರಣ ಈತನಿಗೆ ಮಣೆ ಹಾಕಲಿಲ್ಲ. ಈತ ಒಬ್ಬ ವಂಚಕ, ಅಪಹರಣಕಾರ, ರೌಡಿಶೀಟರ್. ಈತನ ಮೇಲೆ ಹಲವು ಕೇಸ್ ಇವೆ. ಪಾಂಡವಪುರದಲ್ಲಿ ಮಂಡ್ಯ ಜಿಲ್ಲಾಧ್ಯಕ್ಷರು ಹಾಗೂ ನಾನು ದೂರು ಕೊಟ್ಟಿದ್ವಿ ಆಗ ಬಂಧನ ಆಗಿತ್ತು. ಅದರ ದ್ವೇಷದ ಹಿನ್ನಲೆಯಲ್ಲಿ ಹಲ್ಲೆ ಮಾಡಲು ಮುಂದಾಗಿದ್ದು ಅಲ್ಲದೆ, ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿದ್ದಾನೆ.
ಈತನ ಮೇಲೆ ದೂರು ನೀಡಲಾಗಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿರುತ್ತಾರೆ. ಕ್ರಿಮಿನಲ್ ಹಿನ್ನಲೆಯುಳ್ಳ ಈ ವ್ಯಕ್ತಿ ಕರ್ನಾಟಕ ರೈತ ಸಂಘದ ಲಾಂಛನ, ಶಾಲು, ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದು ಈತನ ಮೇಲೆ ಕ್ರಮ ಜರುಗಿಸಬೇಕು. ರೈತ ಸಂಘಕ್ಕೂ ಈತನಿಗೂ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದರು.
ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪುಗೌಡ, ಮನು ಸೋಮಯ್ಯ, ಪ್ರಸನ್ನ ಎನ್. ಗೌಡ, ಶಿರಮನಹಳ್ಳಿ ಸಿದ್ದಪ್ಪ, ಮಹಾದೇವ ನಾಯಕ, ಹೆಜ್ಜೆಗೆ ಪ್ರಕಾಶ್, ಪಿ. ಮರಂಕಯ್ಯ, ಚಂದ್ರಶೇಖರ್, ರಾಘವೇಂದ್ರ ಮೊದಲಾದವರು ಭಾಗಿಯಾಗಿದ್ದರು.