ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಶೂನ್ಯ ಶುಲ್ಕ ಪಾವತಿ ವ್ಯವಸ್ಥೆ ತೆಗೆದುಹಾಕಿ, ದಿಢೀರನೆ ಪ್ರವೇಶ ಶುಲ್ಕವನ್ನು ಕಟ್ಟುವಂತೆ ನಿರ್ದೇಸಿರುವ ಸರಕಾರ, ಕಾಲೇಜು ಮಂಡಳಿ ನಿರ್ಧಾರದ ವಿರುದ್ಧ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಮೈಸೂರು ಮಹಾರಾಣಿ ಪದವಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಮೈಸೂರು ಜಿಲ್ಲಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ಕಳೆದ ವರ್ಷದವರೆಗೂ ಎಸ್ಸಿ ಎಸ್ಟಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸುತ್ತಿರಲಿಲ್ಲ. ಶೂನ್ಯ ಪಾವತಿ ಪದ್ಧತಿ ಜಾರಿಯಲ್ಲಿತ್ತು. ಆದರೆ ಈ ವರ್ಷ ಏಕಾಏಕಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯ ಮಾಡಿದ್ದಾರೆ. ಬಹುಪಾಲು ವಿದ್ಯಾರ್ಥಿಗಳಿಗೆ ಇದುವರೆಗೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಬಂದಿಲ್ಲ , ಆದ್ದರಿಂದ ಶುಲ್ಕವನ್ನು ಕಟ್ಟಲು ಬಹಳ ಕಷ್ಟವಾಗಿದೆ ಎಂದು ತಿಳಿಸಿದರು.
ಮಹಾರಾಣಿ ಕಾಲೇಜಿಗೆ ಸುತ್ತಮುತ್ತಲಿನ ಎಲ್ಲಾ ಹಳ್ಳಿಯ ಬಡ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆದುಕೊಳ್ಳಲು ಬರುತ್ತಾರೆ. ಆದರೆ ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾನಿಲಯ ತನ್ನ ವ್ಯಾಪಾರ ಧೋರಣೆಯಿಂದ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲು ಪ್ರಯತ್ನಿಸುತ್ತಿದೆ. ದಿಢೀರನೆ ನಿನ್ನೆ ಪರೀಕ್ಷಾ ಶುಲ್ಕವನ್ನು ಕಟ್ಟಲು ತಿಳಿಸಿದ್ದಾರೆ ಎಂದು ದೂರಿದರು.

ಯಾವುದೇ ಕಾಲಾವಕಾಶ ಕೊಡದೆ ಇಂದೇ ಕೊನೆಯ ದಿನ ಎಂದು ಹೇಳಿದ್ದಾರೆ. ಇದು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಉಂಟು ಮಾಡಿದೆ. ಆದ್ದರಿಂದ ಈ ಕೂಡಲೇ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಶೂನ್ಯ ಶುಲ್ಕ ಯಥಾವತ್ ಜಾರಿಯಾಗಬೇಕು ಮತ್ತು ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವ ಈ ಧೋರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಈ ಜನಾಂಗಕ್ಕೆ ಬೇಕಂತೆ ಹೆಚ್ಚು ಮಕ್ಕಳು: 4 ಮಕ್ಕಳನ್ನು ಹೆತ್ತವರಿಗೆ ₹1 ಲಕ್ಷ ಬಹುಮಾನದ ಆಫರ್!
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ ಪದಾಧಿಕಾರಿಗಳಾದ ಹೇಮ, ಚಂದ್ರಿಕಾ, ಅಂಜಲಿ, ಅಭಿಷೇಕ್ ಹಾಗೂ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಾದ ಸಿಂಚನ, ರಂಜಿತ, ಚಂದನ, ನಿಕಿತ, ರಕ್ಷಿತಾ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
