ಯುವಜನರು ಪ್ರಜಾಪ್ರಭುತ್ವದ ಆಶಯಗಳು ಹಾಗೂ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಿಡಿಯು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ಹೇಳಿದರು.
ನಗರದ ಡಿಡಿಯು ಶಾಲೆಯಲ್ಲಿ ಶನಿವಾರ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ (ಐಎಸ್ಐ), ಬೆಂಗಳೂರು ಹಾಗೂ ಸ್ಥಳೀಯ ಕನಸು, ಸರ್ವೋದಯ, ಸುಮಿತ್ ಮತ್ತು ಮೈರಾಡ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಯುವಜನರ ಸಾಮರ್ಥ್ಯವರ್ಧಕ ತರಬೇತಿ ಶಿಬಿರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“‘ಪ್ರಜಾಪ್ರಭುತ್ವ ಮತ್ತು ನಾಗರಿಕತೆ’ ವಿಷಯದಡಿ ನಡೆಯುತ್ತಿರುವ ಈ ತರಬೇತಿ ಶಿಬಿರವು ಈ ಭಾಗದ ಯುವಜನರಿಗೆ ಉತ್ತಮ ಅವಕಾಶವಾಗಿದೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು, ಇಲ್ಲಿ ಕಲಿತ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಎಸ್ಐ ಸಂಸ್ಥೆಯ ಕರ್ನಾಟಕ ರಾಜ್ಯ ಮುಖ್ಯಸ್ಥ ಫಾದರ್ ಫ್ರಾನ್ಸಿಸ್ ಬಾಲರಾಜ್ ಮಾತನಾಡಿ, ʼಯುವಜನರಲ್ಲಿ ಸಾಮಾಜಿಕ ಪ್ರಜ್ಞೆ, ನಾಯಕತ್ವ ಗುಣ ಹಾಗೂ ಸಂವಿಧಾನಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಬಿರದ ಮುಖ್ಯ ಉದ್ದೇಶವಾಗಿದೆʼ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಡಾ.ಶ್ರೀನಿವಾಸ ಅವರು ಸ್ಫೂರ್ತಿದಾಯಕ ಹಾಗೂ ಹಾಸ್ಯಮಯ ಕಥೆಗಳ ಮೂಲಕ ಶಿಬಿರಾರ್ಥಿಗಳಲ್ಲಿ ಚಿಂತನೆಗೆ ಪ್ರೇರಣೆ ನೀಡಿದರು.
ಇದನ್ನೂ ಓದಿ : ಬೀದರ್ | ಅ.20ರಂದು ರೇಕುಳಗಿಯಲ್ಲಿ 70ನೇ ಧಮ್ಮಚಕ್ರ ಪ್ರವರ್ತನ ದಿನಾಚರಣೆ
ಕಾರ್ಯಕ್ರಮದಲ್ಲಿ ಪ್ರಮುಖರಾದ ಮೋಹನಕುಮಾರ್ ಹೊಸಮನಿ, ಸಂಗೀತಾ ಹುಲ್ಕಲ್, ಐಎಸ್ಐ ಸಂಸ್ಥೆಯ ರಾಜೇಶ್ ಬಾರಾ, ವಸಂತಕುಮಾರ್, ಮೈರಾಡ್ ಸಂಸ್ಥೆಯ ನಾಗರಾಜ್, ಮಲ್ಲು ಅರಬೋಳ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ದೇವಿಂದ್ರ ಹುಲ್ಕಲ್ ನಿರೂಪಿಸಿ ವಂದಿಸಿದರು.





