ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಕರ್ನಾಟಕ ಪ್ರದೇಶ ಜನತಾದಳದ (ಜಾತ್ಯತೀತ) ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಅವರಿಗೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
2023 ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋತಿದ್ದರು. ಜೆಡಿಎಸ್ ಪಕ್ಷವನ್ನು ಹೊಸದಾಗಿ ಮರು ನಿರ್ಮಾಣ ಮಾಡುವ ಅವಶ್ಯಕತೆಯಿದೆ. ಹೊಸ ನಾಯಕತ್ವಕ್ಕೆ ಅವಕಾಶ ಕೊಡಬೇಕಿದೆ. ಹಾಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
“ಈ ಬಾರಿಯ ವಿಧಾನಸಭಾ ಚುನಾವಣೆ ಫಲಿತಾಂಶ ನನಗೆ ಅತೀವ ಬೇಸರ ಉಂಟು ಮಾಡಿದೆ. ಜೊತೆಗೆ ಪಕ್ಷವನ್ನು ಹೊಸದಾಗಿ ಮರು ನಿರ್ಮಾಣ ಮಾಡುವ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎಂದು ವಿಶ್ವಾಸದಿಂದ ಹೇಳಬಯಸುತ್ತೇನೆ” ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಇಷ್ಟು ದಿನ ಕರ್ನಾಟಕ ಪ್ರದೇಶ ಯುವ ಜನತಾದಳ (ಜಾತ್ಯತೀತ) ಘಟಕದ ಅಧ್ಯಕ್ಷನಾಗಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹಾಗೂ ತಮ್ಮ ಮಾರ್ಗದರ್ಶನದಿಂದ ನನ್ನ ಕೈಲಾದ ಮಟ್ಟಿಗೆ ಕರ್ತವ್ಯ ನಿರ್ವಹಿಸಿದ್ದೇನೆ. ಪಕ್ಷ ಸಂಘಟನೆ ಮಾಡಲು ಶ್ರಮಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಸಮ್ಮಿಶ್ರ ಸರ್ಕಾರ; ಆರ್ ಅಶೋಕ್ ಟೀಕೆ
“ಚುನಾವಣೆಯ ಸೋಲು ಅಂತಿಮವಲ್ಲ, ಈ ಸೋಲನ್ನು ಮೆಟ್ಟಿ ಪಕ್ಷವನ್ನು ಬಲವಾಗಿ ಕಟ್ಟುವ ದಿಸೆಯಲ್ಲಿ ನಾವೆಲ್ಲರೂ ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಬೇಕಿದೆ, ಹೊಸ ನಾಯಕತ್ವಕ್ಕೆ ಅವಕಾಶ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ನಾನು ಕರ್ನಾಟಕ ಪ್ರದೇಶ ಜನತಾದಳ (ಕರ್ನಾಟಕ) ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.