ಜಾತಿ ಭೇದವ ಮೀರಿ ಸಮಾನತೆ ಸಾರುವ ಸಾರ್ವಕಾಲಿಕ ಸತ್ಯ ವಚನಗಳಲ್ಲಿ ಅಡಗಿದೆ ಎಂದು ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು.
ಹುಬ್ಬಳ್ಳಿ ನಗರದ ಮೂರುಸಾವಿರ ಮಠದಲ್ಲಿ ಮಹಾಶರಣೆ ಗಂಗಾಂಬಿಕ ಬಳಗದ ನೇತೃತ್ವದಲ್ಲಿ, ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ 18 ವಿವಿಧ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಶರಣ ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಬಸವಾದಿ ಶರಣರ 108 ವಚನಗಳ ಸಾಮೂಹಿಕ ಪಾರಾಯಣ ಕಾರ್ಯಕ್ರಮದಲ್ಲಿ ವಚನ ಪಾರಾಯಣ ಮಾಲಿಕೆ-1 ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

“ವಚನಗಳು ವಿಶ್ವದ ಶ್ರೇಷ್ಠ ಮೌಲ್ಯ ಸಾರುವ ತತ್ವಗಳಾಗಿವೆ. ಜಾತಿ, ಮತ, ಪಂಥ ಭೇದವನ್ನು ಮೀರಿ ಸಮಾನತೆ ಸಾರುವ ಸಾರ್ವಕಾಲಿಕ ಸತ್ಯ ವಚನಗಳಲ್ಲಿ ಅಡಗಿದೆ. ನಾನು ವಚನ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ತಲೆಯ ಮೇಲೆ ಎತ್ತಿ ಹಿಡಿದು ಗೌರವಿಸಿದ್ದೇನೆ” ಎಂದರು.
ಅಥಣಿ ಶಿವಯೋಗಿಗಳು, ಇಳಕಲ್ಲಿನ ವಿಜಯಮಹಾಂತಪ್ಪಗಳು, ಘನಮಠ ಶಿವಯೋಗಿಗಳು ವಚನ ಗ್ರಂಥಗಳನ್ನು ಬೆನ್ನಿಗೆ ಕಟ್ಟಿಕೊಂಡು ನಾಡಿನಾದ್ಯಂತ ಸಂಚರಿಸಿ ವಚನಗಳ ಪ್ರಸಾರ ಮಾಡಿದ್ದು ಈ ನಾಡಿನ ಇತಿಹಾಸದಲ್ಲಿ ಇರುವುದನ್ನು ಸ್ಮರಿಸಿದರು. ಲಿಂಗಾಯತ ಧರ್ಮಿಯರು ವಚನಗಳನ್ನೇ ನಿತ್ಯ ಪಾರಾಯಣ ಮಾಡಿ ಬದುಕನ್ನು ಹಸನುಗೊಳಿಸಿಕೊಳ್ಳುವ ಸಂದೇಶ ನೀಡಿದರು.
ಹಿರಿಯ ಅನುಭಾವಿ ಪ್ರೊ. ಸಿದ್ದಣ್ಣ ಲಂಗೋಟಿ ಸಭೆಯಲ್ಲಿ ತಮ್ಮ ಅನುಭವ ನೀಡಿದರು. ಡಾ. ಸ್ನೇಹಾ ಭೂಸನೂರ ಹಾಗೂ ಸುಮಾರು 200 ಕ್ಕೂ ಅಧಿಕ ಶರಣೆಯರು ಏಕಕಾಲಕ್ಕೆ ಬಸವಾದಿ ಶರಣರ 108 ವಚನಗಳನ್ನು ಪಾರಾಯಣ ಮಾಡಿದರು.

