- ‘ರಾಜ್ಯ ಸರ್ಕಾರ ಪ್ರತಿಯೊಂದು ಹುದ್ದೆಯನ್ನೂ ಹರಾಜು ಹಾಕುತ್ತಿದೆ’
- ‘ಯಾವುದೇ ಅಧಿಕಾರಿಯನ್ನು ಕೇಳಿದರೂ ಇದೇ ಮಾತು ಹೇಳುತ್ತಿದ್ದಾರೆ’
ರಾಜ್ಯ ಸರ್ಕಾರ ಪ್ರತಿಯೊಂದು ಹುದ್ದೆಯನ್ನೂ ಹರಾಜು ಹಾಕುತ್ತಿದೆ. 10 ಲಕ್ಷ ರೂ. ಬದಲು ಯಾರಾದರೂ 12 ಲಕ್ಷ ರೂ. ಕೊಡಲು ಮುಂದೆ ಬಂದರೆ ಅವರಿಗೆ ಪೋಸ್ಟಿಂಗ್ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಯಾವುದೇ ಅಧಿಕಾರಿಯನ್ನು ಕೇಳಿದರೂ ಇದನ್ನೇ ಹೇಳುತ್ತಿದ್ದಾರೆ. ಯಾರು ಹೆಚ್ಚು ಹಣ ಕೊಡುತ್ತಾರೆಯೋ ಅವರಿಗೆ ಪೋಸ್ಟಿಂಗ್ ಮಾಡಲಾಗುತ್ತಿದೆ. ಈ ಸರ್ಕಾರದಲ್ಲಿ ಶಾಸಕರು ಬಂಡಾಯ ಏಳಲು ಕಾರಣ ಏನೆಂದರೆ, ಈ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಆಗಿರುವುದು” ಎಂದು ವಾಗ್ದಾಳಿ ನಡೆಸಿದರು.
“ವರ್ಗಾವಣೆ ದಂಧೆ ವಿಚಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದು ಜನವಿರೋಧಿ ಸರ್ಕಾರ, ಸುಳ್ಳು ಹೇಳುವ ಸರ್ಕಾರ. ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿದೆ. ಜನರು ಇದಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ” ಎಂದು ಹೇಳಿದರು.
“ಬಸ್ನಲ್ಲಿ ಉಚಿತ ಪ್ರಯಾಣ ನೀಡುತ್ತಿದ್ದೇವೆ ಎನ್ನುತ್ತಿದ್ದಾರೆ. ಬಸ್ ಓಡಾಡಲು ಒಳ್ಳೆ ರಸ್ತೆ ಬೇಕು. ರಸ್ತೆ ಕಾಮಗಾರಿಗೆ ಶಾಸಕರು ಅನುದಾನ ಕೇಳಿದರೆ ನಿರಾಕರಿಸುತ್ತಾರೆ. ಮಳೆ ಬಂದು ರಸ್ತೆಗಳಿಗೆ ಹಾನಿಯಾಗಿವೆ, ನಯಾಪೈಸೆ ಅನುದಾನ ಕೊಟ್ಟಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಶಾಸಕರಿಗೆ ಸರ್ಕಾರ ಹಣ ನೀಡುತ್ತಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಕುಮಾರಣ್ಣನ ಕುರಿತು ನನಗೂ ಒಂದಿಷ್ಟು ಮಾಹಿತಿ ಗೊತ್ತಿದೆ: ಡಿಸಿಎಂ ಡಿಕೆ ಶಿವಕುಮಾರ್
ಕೊಲೆಗಡುಕರಿಗೆ ಧೈರ್ಯ ಬಂದಿದೆ
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಕೊಲೆಗಡುಕರಿಗೆ ಮತ್ತಷ್ಟು ಧೈರ್ಯ ಬಂದಿದೆ. ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಘಟನೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಇದೆ ಎಂದು ಅವರಿಗೆ ಇಷ್ಟೆಲ್ಲಾ ಧೈರ್ಯ ಬರುತ್ತಿದೆ” ಎಂದು ಹರಿಹಾಯ್ದರು.
“ಕಾಂಗ್ರೆಸ್ ಸರ್ಕಾರ ನಮಗೆ ರಕ್ಷಣೆ ಕೊಡುತ್ತದೆ ಎಂಬ ಭರವಸೆ ಅವರಿಗಿದೆ. ಹೀಗಾಗಿ ಕೊಲೆ ಮಾಡುವುದು, ಫೋಟೋ ಎಡಿಟ್, ಚಿತ್ರೀಕರಣ ಮಾಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಈ ಸರ್ಕಾರದ ಮೇಲೆ ಭರವಸೆ ಹೋಗಿದೆ” ಎಂದರು.