ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕಾವಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯನ್ನು ಅಭ್ಯರ್ಥಿಗಳೇ ಬಹಿಷ್ಕರಿಸುವ ಅಪರೂಪದ ಘಟನೆ ನಡೆದಿದೆ. 2023-24ನೇ ಸಾಲಿನ ಮುಂದಿನ ಐದು ವರ್ಷಗಳಿಗೆ ಆಡಳಿತ ಮಂಡಳಿ ಸದಸ್ಯರಾಗಲು 11 ಮಂದಿ ಅಭ್ಯರ್ಥಿಗಳಿಗಾಗಿ ಅಗಸ್ಟ್ 5 ರಂದು ಚುನಾವಣೆ ನಿಗದಿಯಾಗಿದೆ. ಆಡಳಿತ ಮಂಡಳಿಯ ಸದಸ್ಯತ್ವ ಬಯಸಿ ಎರಡು ಬಣದಿಂದ ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿದ್ದರು.
ಒಂದು ಬಣದ 11 ಜನ ಅಭ್ಯರ್ಥಿಗಳಿಗೆ ನೀಡಿದ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಸುಮಾರು 177 ಸದಸ್ಯರನ್ನು ಅನರ್ಹಗೊಳಿಸಿ ಅವರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಿರುವುದು ಅಭ್ಯರ್ಥಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಬಣದವರು ಹೈಕೋರ್ಟ್ ಮೆಟ್ಟಿಲೇರಿ, 177 ಅನರ್ಹ ಸದಸ್ಯರಲ್ಲಿ 43 ಸದಸ್ಯರನ್ನು ಅರ್ಹಗೊಳಿಸಿ ಮತದಾನ ಮಾಡಲು ಹಕ್ಕು ನೀಡಿರುವುದು ಗಮನಕ್ಕೆ ಬಂದಿದೆ.
ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 13ಡಿ (2-A) ರನ್ವಯ ಸಂಘದ ಚುನಾವಣೆಗೆ 195 ದಿನ ಬಾಕಿ ಇರುವಾಗ ಅನರ್ಹ ಸದಸ್ಯರಿಗೆ ನೋಟಿಸ್ ನೀಡಿ, ಸ್ವೀಕೃತವಾದ ಅಹವಾಲುಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿ, ನಿಯಮಾನುಸಾರ ವಿಚಾರಣೆ ನಡೆಸಿ ವಿಲೇವಾರಿಗೊಳಿಸಬೇಕು. ಆದರೆ ಅಂತಿಮ ಮತದಾರರ ಪಟ್ಟಿ ಸಿದ್ಧಪಡಿಸಿರುವುದರಿಂದ ಸಂಘದ ಸದಸ್ಯರು ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.
ಇದು ಕಾನೂನಿಗೆ ವಿರುದ್ಧವಾಗಿದ್ದು, ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕ್ರಮ ದುರುದ್ದೇಶದಿಂದ ಕೂಡಿದೆ ಎಂದು ಆಪಾದಿಸಲಾಗಿದೆ. ಈ ರೀತಿಯಾಗಿ ಸಂಘದ ಸದಸ್ಯರಿಗೆ ಅನ್ಯಾಯವಾಗಿ ಅವರನ್ನು ಹಕ್ಕಿನಿಂದ ವಂಚಿತರನ್ನಾಗಿ ಮಾಡಿರುವುದಕ್ಕೆ 11 ಮಂದಿ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸುವುದರೊಂದಿಗೆ, 11 ಮಂದಿ ಅಭ್ಯರ್ಥಿಗಳೂ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಮತದಾನದಿಂದ ವಂಚಿತರಾದ ಸಂಘದ ಸದಸ್ಯರ ಪರವಾಗಿ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಲು ತಮ್ಮ ಸಂಪೂರ್ಣ ಬೆಂಬಲ ಘೋಷಿಸಿ ಪ್ರತಿಭಟಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ʼಗೃಹಜ್ಯೋತಿʼ ಯೋಜನೆಗೆ ಅಧಿಕೃತ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
“11 ಮಂದಿ ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗೆ ಮನವಿ ಸಲ್ಲಿಸಿ ಅನರ್ಹ ಸದಸ್ಯರ ಪಟ್ಟಿಯನ್ನು ಮರುಪರಿಶೀಲಿಸಿ, ಅನ್ಯಾಯ ಹಾಗೂ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಮಂಜುನಾಥ ಹೆಬ್ಬಾರ್, ಮಹಾಬಲ ಪೂಜಾರಿ, ಸಂತೋಷ್ ಶೆಟ್ಟಿ, ರಾಜೀವ ಶೆಟ್ಟಿ, ದಿನಕರ್ ಶೆಟ್ಟಿ, ಕೃಷ್ಣ ಜಿ. ಕುಮಾರ್, ಸಂಪ ಮರಕಾಲ್ತಿ, ರುದ್ರಮ್ಮ ಶೆಟ್ಟಿ, ಸವಿತಾ, ಜ್ಯೋತಿ ಕುಲಾಲ್, ಗಿರಿಜಾ ಕುಲಾಲ್ತಿ ಚುನಾವಣೆ ಬಹಿಷ್ಕರಿಸಿದ್ದು, ಸಂಘದ ಸದಸ್ಯರಾದ
ಗಣೇಶ್ ರಾವ್, ಉದಯ ಚಂದ್ರ ಶೆಟ್ಟಿ, ಪ್ರಭಾಕರ್ ಮಾಸ್ಟರ್, ಗೋಪಾಲ್ ಕಾಂಚನ್, ಜಯರಾಮ್ ಶೆಟ್ಟಿ, ವೇದಾವತಿ ಜಿ. ರಾವ್, ಜಯ ಮಹಾಬಲ ಪೂಜಾರ್ತಿ ಸೇರಿದಂತೆ ಇತರರು ಬೆಂಬಲ ಸೂಚಿಸಿದರು.