ಅಕ್ರಮ ಮರಳು ದಂಧೆಯನ್ನು ತಡೆಯಲು ಹೋದ ಪೊಲೀಸ್ ಪೇದೆ ಮೇಲೆಯೇ ದಂಧೆಕೋರರು ಭೀಕರ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ನಡೆದಿದೆ.
ಕೆಲವು ದಿನದಿಂದ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿರುವುದು ಪೊಲೀಸ್ ಗಮನಕ್ಕೆ ಬಂದಿತ್ತು. ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾದ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಲಾಗಿದೆ.
ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ ಪುತ್ರ ಸಂತೋಷ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾದ ಪೊಲೀಸ್ ಪೇದೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೆಲವು ದಿನ ಹಿಂದೆ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಶಾಸಕಿ ಕರೆಮ್ಮ ಜಿ. ನಾಯಕ್ ಅವರು, ಪೊಲೀಸರಿಗೆ ಇಲ್ಲಿ ಯಾವುದೇ ಆಕ್ರಮ ಮರಳು ಸಾಗಣೆ ನಡೆಯಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ, ಇಂದು ಪೊಲೀಸ್ ಪೇದೆ ಆಕ್ರಮ ಮರಳು ಸಾಗಿಸುತ್ತಿದ್ದ ವಾಹನಗಳನ್ನು ತಡೆದು ವಿಚಾರಿಸಿದಾಗ, ಶಾಸಕಿಯವರ ಪುತ್ರ ಹಾಗೂ ಹಿಂಬಾಲಕರು ಸೇರಿ ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲು: ಶಾಸಕಿಯಿಂದ ಪ್ರತಿಭಟನೆ
ಹಲ್ಲೆ ಪ್ರಕರಣ ಸಂಬಂಧ ಆಪ್ತ ಸಹಾಯಕ ಇಲಿಯಾಸ್ ಎಂಬಾತನನ್ನು ಬಂಧಿಸಲಾಗಿದೆ. ಪೇದೆ ಹೇಳಿಕೆಯಂತೆ ಹಲ್ಲೆ ಮಾಡಿದ ಶಾಸಕಿ ಪುತ್ರ ಸೇರಿದಂತೆ 8 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಪೊಲೀಸ್ ಪೇದೆ ಮೇಲೆ ಹಲ್ಲೆ ಪ್ರಕರಣದಲ್ಲಿ ಕರೆಮ್ಮ ಜಿ ನಾಯಕ್ ನ ಪುತ್ರ ಎ2 ಆರೋಪಿಯಾಗಿದ್ದು, ಶಾಸಕರ ಸರಕಾರಿ ಆಪ್ತ ಸಹಾಯಕ ಇಲಿಯಾಸ್ ಎ1 ಆರೋಪಿ ಎಂದು ಕೇಸು ದಾಖಲು ಮಾಡಲಾಗಿದೆ. ಶಾಸಕಿ ಪುತ್ರ ಸಂತೋಷ್ ನಾಯಕ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ತಿಮ್ಮಾರೆಡ್ಡೆ ಸೇರಿದಂತೆ 8 ಜನರ ವಿರುದ್ಧ ಅಟ್ರಾಸಿಟಿ ಕೇಸು ದಾಖಲಾಗಿದೆ.
ಜಾತಿ ನಿಂದನೆ ಆರೋಪದ ಮೇಲೆ ಕೇಸ್ ದಾಖಲಾಗುತ್ತಿದ್ದಂತೆಯೇ ರೊಚ್ಚಿಗೆದ್ದ ಶಾಸಕಿ ಪೊಲೀಸ್ ಠಾಣೆ ಮುಂದೆ ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ. ಪುತ್ರ, ಸಹೋದರ ಹಾಗೂ ಆಪ್ತ ಕಾರ್ಯದರ್ಶಿ ಪರವಹಿಸಿ ಪ್ರತಿಭಟನೆ ಮಾಡಿದ್ದಾರೆ.
ತನಿಖೆ ಮಾಡದೇ ಹೇಗೆ ಅಟ್ರಾಸಿಟಿ ದಾಖಲಿಸಿದ್ದೀರಿ? ನಾವೂ ಕೂಡ ಅಟ್ರಾಸಿಟಿ ದಾಖಲಿಸುತ್ತೇವೆ ಎಂದು ದೂರು ನೀಡಲು ಮುಂದಾದರು. ಈ ವೇಳೆ ದೂರು ತೆಗೆದುಕೊಳ್ಳಲು ದೇವದುರ್ಗ ಪೊಲೀಸರು ನಿರಾಕರಿಸಿದರು. ಆಗ ಶಾಸಕಿ ನಮಗೆ ನ್ಯಾಯ ಬೇಕು ಎಂದು ಪ್ರತಿಭಟನೆಗೆ ಕೂತಿದ್ದಾರೆ. ಬೆಳಗಿನ ಜಾವ 5 ಗಂಟೆವರೆಗೂ ಶಾಸಕಿ ಪ್ರತಿಭಟನೆ ನಡೆಸಿದರು.