ತೆಲಂಗಾಣದಿಂದ ಬರುವ ಲಿಂಗತ್ವ ಅಲ್ಪಸಂಖ್ಯಾತರು ಸ್ಥಳೀಯರ ಮೇಲೆ ದೌರ್ಜನ್ಯ ಎಸಗಿ ಜೀವ ಬೆದರಿಕೆ ಹಾಕುತ್ತಿರುವುದನ್ನು ತಡೆಯಲು ಸರ್ಕಾರ ಕ್ರಮ ವಹಿಸುವಂತೆ ಆಪ್ತಮಿತ್ರ ನಗರ ಮತ್ತು ಗ್ರಾಮೀಣ ಅಭಿವೃದ್ದಿ ಸೇವಾ ಸಂಸ್ಥೆ ಅಧ್ಯಕ್ಷೆ ಪ್ರಗತಿ ಆಗ್ರಹಿಸಿದರು.
ರಾಯಚೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸ್ಥಳೀಯ ಹುಲಿಗೆಮ್ಮ ಎಂಬುವವರು ತೆಲಂಗಾಣದ ಲಿಂಗತ್ವ ಅಲ್ಪಸಂಖ್ಯಾತರೊಂದಿಗೆ ಸೇರಿಕೊಂಡು ಗುಂಪು ರಚಿಸಿಕೊಂಡಿದ್ದಾರೆ. ಒಮ್ಮೆ 40-50 ಮಂದಿ ಬಂದು ಜಿಲ್ಲೆಯಲ್ಲಿ ಭಿಕ್ಷಾಟನೆ ಮಾಡುತ್ತಾರೆ. ಸ್ಥಳೀಯರಿಗೆ ಕಿರುಕುಳ ನೀಡಿ, ದೌರ್ಜನ್ಯ ಎಸಗಿ, ಕಲೆಕ್ಷನ್‌ಗೆ ಬರದಂತೆ ತಡೆಯುತ್ತಿದ್ದಾರೆ” ಎಂದು ಆರೋಪಿಸಿದರು.
“ಮೂರು ದಿನಗಳಿಂದ ಪೋನ್ ಕರೆ ಮಾಡಿ ತೆಲಂಗಾಣ ಗುಂಪಿಗೆ ಸೇರುವಂತೆ ಒತ್ತಾಯಿಸುತ್ತಿದ್ದಾರೆ. ಪ್ರಶ್ನಿಸಿದರೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್‌ಪಿಗೆ ದೂರು ನೀಡಲಾಗಿದೆ” ಎಂದು ತಿಳಿಸಿದರು.
“ಪೊಲೀಸರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಿಂಧನೂರು, ಅನಂತಪುರ ಸೇರಿದಂತೆ ಅನೇಕ ಕಡೆ ಗಲಾಟೆ ಮಾಡಿಕೊಂಡಿದ್ದು, ಭಿಕ್ಷಾಟನೆ ಮಾಡಿ ಬದುಕುತ್ತಿರುವ ಸ್ಥಳೀಯರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಉದ್ಯೋಗ ಸೇರಿದಂತೆ ಇತರೆ ಕೆಲಸಗಳನ್ನು ನೀಡುತ್ತಿಲ್ಲ. ಕುಟುಂಬದಿಂದ ದೂರವಾಗಿ, ಸಮಾಜದಿಂದ ತಿರಸ್ಕಾರಕ್ಕೆ ಒಳಗಾಗಿ ಬದುಕುತ್ತಿರುವ ಲಿಂಗತ್ವ ಅಲ್ಪಸಂಖ್ಯಾತರು ಕೆಲವರಿಂದ ಇಲ್ಲದ ಆರೋಪಕ್ಕೆ ತುತ್ತಾಗುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರಾಯಲಸೀಮಾ ಸೇರಿ ಆಂಧ್ರಪ್ರದೇಶಕ್ಕೆ ಹೋಗಿ ನಮ್ಮವರು ಭಿಕ್ಷಾಟನೆ ಮಾಡಿದರೂ ಬೆದರಿಸುತ್ತಿದ್ದಾರೆ. ಅಲ್ಲಿಯವರು ಇಲ್ಲಿ ಬಂದು ನಮ್ಮವರನ್ನೇ ಹೆದರಿಸುತ್ತಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಮಣಿಪುರ ಮಹಿಳೆಯರ ಮೇಲೆ ದೌರ್ಜನ್ಯ; ವಿದ್ಯಾರ್ಥಿಗಳ ಖಂಡನೆ
ಲಕ್ಷ್ಮಣ ಮಾತನಾಡಿ, ಮಂಗಳಮುಖಿಯರಿಗೆ ಬಿಕ್ಷಾಟನೆ ಬಿಟ್ಟು ಬೇರೆ ಯಾವ ಕೆಲಸಗಳು ನೀಡುತ್ತಿಲ್ಲ. ಸಮಾಜ, ಕುಟುಂಬದಿಂದ ತಿರಸ್ಕಾರಕ್ಕೆ ಒಳಗಾಗಿದ್ದಾರೆ. ಅವರನ್ನು ಭಿಕ್ಷೆ ಬೇಡಿ ಬದುಕಲೂ ಸಹ ಬಿಡದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಕ್ಷಣೆ ನೀಡಬೇಕು” ಎಂದರು.
ಈ ಸಂದರ್ಭದಲ್ಲಿ ಕಾಜಲ್, ಶಿರಿಷಾ, ಸೀಮಾ, ವಂದನಾ ಸೇರಿದಂತೆ ಇತರರು ಇದ್ದರು.