ಕಾರ್ಪೋರೇಟ್ ಪರ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಗಮನ ಬೇರೆಡೆ ಸೆಳೆಯಲು ಜನರ ಮಧ್ಯೆ ಜಾತಿ, ಧರ್ಮಗಳ ವಿಷಬೀಜ ಬಿತ್ತುತ್ತಿದೆ. ವಿರೋಧ ಪಕ್ಷಗಳು ಜಾಣಮೌನ ವಹಿಸಿ ಪರೋಕ್ಷವಾಗಿ ಸಹಕರಿಸುತ್ತಿವೆ ಎಂದು ಪ್ರಗತಿಪರ ಚಿಂತಕ ಹಾಗೂ ಸಾಹಿತಿ ಶಿವಸುಂದರ್ ಹೇಳಿದರು.
ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆಯ ಅಂಗವಾಗಿ ರಾಯಚೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ಬಳಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಭಾರತ ದೇಶದ ಸಂವಿಧಾನಕ್ಕಿರುವ ಅಪಾಯಗಳು ಮತ್ತು ಅದರ ಪರಿಣಾಮಗಳು’ ವಿಷಯದ ಕುರಿತು ವಿಚಾರ ಮಂಡನೆ ವೇಳೆ ಅವರು ಮಾತನಾಡಿದರು.
“ಸ್ವಾತಂತ್ರ್ಯದ ನಂತರ ಅಂಬೇಡ್ಕರ್ ಅವರು ಎಲ್ಲ ಸಮುದಾಯಕ್ಕೆ ಅಧಿಕಾರ ಸಿಗಬೇಕೆಂದು ಸಂವಿಧಾನ ರಚಿಸಿದರು. ಆದರೆ ಕೆಲವೇ ಸಮುದಾಯದವರು ಅಧಿಕಾರಕ್ಕೆ ಬರುತ್ತಿದ್ದಾರೆ ಹಾಗೂ ಬಂಡವಾಳಶಾಹಿಪರ ಆಡಳಿತ ನಡೆಸಿ ಹಿಂದುಳಿದ, ಅಲ್ಪಸಂಖ್ಯಾತರ, ಪರಿಶಿಷ್ಟರ ವಿರೋಧಿಯಾಗಿದ್ದು ಜನರ ಮಧ್ಯೆ ವ್ಯವಸ್ಥಿತವಾಗಿ ಕಂದಕ ಸೃಷ್ಠಿಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಶಿಕ್ಷಣ, ಸಮಾನ ಅಧಿಕಾರ, ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು. ಇದಕ್ಕಾಗಿಯೇ ಮೀಸಲಾತಿ ಜಾರಿಗೊಳಿಸಲಾಗಿತ್ತು. ಆದರೆ ಎನ್‌ಡಿಎ ಸರ್ಕಾರ ಸಾರ್ವಜನಿಕ ಸಂಸ್ಥೆಗಳನ್ನು ಬಂಡವಾಳಶಾಹಿಗಳಿಗೆ ನೀಡಿ ಮೀಸಲಾತಿ ರದ್ದುಗೊಳಿಸುವ ಹುನ್ನಾರ ನಡೆಸುತ್ತಿದೆ. ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕಿತ್ತು. ಆದರೆ ಕೆಲವೇ ಬಂಡವಾಳಶಾಹಿಗಳ ಕೈಯಲ್ಲಿದೆ. ಶಾಸಕಾಂಗ, ಕಾರ್ಯಾಂಗದ ಆಡಳಿತ ಸರಿದಾರಿಗೆ ತರಲು ಪ್ರಯತ್ನಿಸಬೇಕಿರುವ ನ್ಯಾಯಾಂಗ ದಾರಿ ತಪ್ಪಿ, ವಿರುದ್ಧ ದಿಕ್ಕಿನಲ್ಲಿ ಸಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
“ದೇಶದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿದವರ ಧ್ವನಿ ಅಡಗಿಸಲು ಪಾಕಿಸ್ತಾನಿ ಏಜೆಂಟ್, ದೇಶದ್ರೋಹಿ, ಆಧುನಿಕ ನಕ್ಸಲೈಟ್ ಎಂದು ಬಿಂಬಿಸಲಾಗುತ್ತಿದೆ. ಇದರ ವಿರುದ್ಧ ಜನರು ಜಾಗರೂಕರಾಗಿ ಹೋರಾಡದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯಕ್ಕಾಗಿ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಚಳವಳಿ ನಡೆಯಬೇಕು. ಜನರೇ ವಿರೋಧ ಪಕ್ಷಗಳಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು” ಎಂದು ಸಲಹೆ ನೀಡಿದರು.
ದಲಿತಪರ ಹೋರಾಟಗಾರ ವಕೀಲ ಎಸ್ ಮಾರೆಪ್ಪ ಮಾತನಾಡಿ, “ತಮಿಳುನಾಡಿನ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ಮಾತನಾಡಿದರೆ ಪ್ರತಿಕ್ರಿಯಿಸುವ ಪ್ರಧಾನಿ ಮೋದಿ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯದ ಬಗ್ಗೆ ಮೌನ ವಹಿಸುತ್ತಾರೆ. ಎಲ್ಲರ ಆಶಯ ಬದಿಗೊತ್ತಿ ವರ್ಣಾಶ್ರಮ ಪದ್ದತಿ ಪೋಷಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ದೇಶದ ಯುವಕರು ಕಾರ್ಲ್ ಮಾರ್ಕ್ಸ್, ಡಾ.ಬಿ ಆರ್ ಅಬೇಡ್ಕರ್, ಬುದ್ಧ, ಬಸವಣ್ಣನವರ ಬಗ್ಗೆ ಅಧ್ಯಯನ ಮಾಡಬೇಕು. ಪ್ರಸ್ತುತ ವಿದ್ಯಮಾನದ ಬಗ್ಗೆ ಜಾಗೃತರಾಗಿ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ಅನಿತಾ ಬಸವರಾಜ ಮಂತ್ರಿ ಮಾತನಾಡಿ, “ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಮಹಿಳೆಯರು ಮುಖ್ಯವಾಹಿನಿಗೆ ಬಂದಿಲ್ಲ. ಮಹಿಳೆಯರ ಬಗ್ಗೆ ಕೀಳರಿಮೆ ಇನ್ನೂ ಇದೆ. ಮಹಿಳೆ ಸ್ವಾತಂತ್ರ್ಯಕ್ಕೆ ಬುದ್ಧ ಬೀಜ ಹಾಕಿ, ಬಸವಣ್ಣ ಮರವಾಗಿಸಿದರೆ, ಡಾ.ಬಿ.ಆರ್ ಅಂಬೇಡ್ಕರ್ ಸಿಹಿಯಾದ ಫಲ ನೀಡಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ದೇಶದ ಸಂವಿಧಾನದ ಪುಸ್ತಕ ಇರಬೇಕು ಹಾಗೂ ಅಧ್ಯಯನ ಮಾಡಬೇಕು” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪಾಲಿಕೆ ನಿರ್ಲಕ್ಷ್ಯ: ಮೂಲಭೂತ ಸೌಕರ್ಯದಿಂದ ವಂಚಿತರಾಗಿರುವ ಮಿಳಘಟ್ಟ ನಿವಾಸಿಗಳು
ಕೆನರಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ಮುಖಂಡ ನರಸಪ್ಪ, ಜನಶಕ್ತಿ ಸಂಘದ ಗೌರವಾಧ್ಯಕ್ಷ ಅಂಜಿನಯ್ಯ, ವಕೀಲ ಲಕ್ಷ್ಮಣ ಭಂಡಾರಿ, ತಾಯಪ್ಪ ಭಂಡಾರಿ, ಜನ ಸಂಗ್ರಾಮ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಖಾಜಾ ಅಸ್ಲಂ ಅಹ್ಮದ್, ಗ್ರಾಮೀಣ ಕೂಲಿಕಾರರ ಸಂಘದ ಮುಖಂಡೆ ಮಲ್ಲಮ್ಮ ಕಲ್ಮಲಾ ಇದ್ದರು.