2009ರಲ್ಲಿ ಸುರಿದ ಧಾರಾಕಾರ ಮಳೆಯಿಂದ ಅನೇಕರು ಮನೆ ಕಳೆದುಕೊಂಡಿರುವ ನೆರೆ ಸಂತ್ರಸ್ತರನ್ನು ಗುರುತಿಸಿ ಪುನರ್ ವಸತಿ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಯಿಂದ ರಾಯಚೂರು ಜಿಲ್ಲಾಡಳಿತಕ್ಕೆ ಹಕ್ಕೊತ್ತಾಯ ಸಲ್ಲಿಸಿದರು.
“ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ 2009ರ ಅಕ್ಟೋಬರ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಮನೆಗಳು ಬಿದ್ದು ನೆಲಸಮವಾಗಿದ್ದು, ಗ್ರಾಮಲೆಕ್ಕಾಧಿಕಾರಿ ಸರ್ವೆ ಮಾಡಿದರೂ ಕೂಡಾ ಸರ್ಕಾರದಿಂದ ಈವರೆಗೆ ನೆರೆ ಸಂತ್ರಸ್ತರಿಗೆ ಪುನರ್ವಸತಿ ಹಂಚಿಕೆ ಮಾಡಿಲ್ಲ” ಎಂದು ಆಗ್ರಹಿಸಿದರು.
“ಆ ವರ್ಷದಲ್ಲಿ(2009)ರಲ್ಲಿ ಸರ್ವೆ ಮಾಡಿ ಗುರುತಿಸಲಾದ ಫಲಾನುಭವಿಗಳನ್ನು ಬಿಟ್ಟು, ಹೊಸದಾಗಿ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿದ್ದು, ಅನರ್ಹರಿಗೆ ನೆರೆ ಸಂತ್ರಸ್ತರ ಮನೆಗಳನ್ನು ಹಂಚಲು ಹುನ್ನಾರ ನಡೆಸಿರುವುದು ಕಂಡುಬಂದಿದೆ. ರಾಜಕೀಯ ಕೈವಾಡದಿಂದ ನೆರೆ ಸಂತ್ರಸ್ತರಿಗೆ ಮನೆಗಳನ್ನು ಹಂಚುವಲ್ಲಿ ತಾರತ್ಯಮ ಮಾಡಿದ್ದು, ನಿಜವಾಗಿಯೂ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಗೆ ಮನೆಗಳನ್ನು ವಿತರಣೆ ಮಾಡಿಲ್ಲ” ಎಂದು ಆರೋಪಿಸಿದರು.
“ಕೆಲವು ಸ್ಥಳೀಯ ಅಧಿಕಾರಿಗಳು ದುಡ್ಡಿನ ಆಮಿಷಕ್ಕೆ ಒಳಗಾಗಿ ಪಟ್ಟಿಯಲ್ಲಿ ಸೇರಿಸಲಾದ ಫಲಾನುಭವಿಗಳನ್ನು ಕೈಬಿಟ್ಟು ತಮಗೆ ಮನಸ್ಸಿಗೆ ಬಂದಂತೆ ಸಂತ್ರಸ್ತರಲ್ಲದ ವ್ಯಕ್ತಿಗಳಿಗೆ ಹಕ್ಕುಪತ್ರ ನೀಡಿರುವುದು ಖಂಡನೀಯ” ಎಂದರು.
“ಮೇಲಧಿಕಾರಿ ಜಿಲ್ಲಾಧಿಕಾರಿಯವರು ಮರಳಿ ಪರಿಶೀಲನೆ ಮಾಡಿ, ಒಟ್ಟು ಫಲಾನುಭವಿಗಳ 159 ಮನೆಗಳು ಮಂಜೂರಾಗಿದ್ದು, ಆ ಪೈಕಿ 109 ಮನೆಗಳು ನಿರ್ಮಾಣವಾಗಿರುತ್ತವೆ. ಆದ್ದರಿಂದ ಇನ್ನು 50 ಮನೆಗಳು ಖಾಲಿಯಿದ್ದು, ಅವುಗಳಲ್ಲಿ ಊರಿನ ಕಡುಬಡವರಿಗೆ ಅವರ ಪರಿಸ್ಥಿತಿಯನ್ನು ಅವಲೋಕನ ಮಾಡಿ ನಿಜವಾದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪಾಸ್‌ಪೋರ್ಟ್ ಅರ್ಜಿ ತಿರಸ್ಕಾರ; ವಾಸ್ತುಶಿಲ್ಪಿ ಕೆ ಜಿ ಶ್ರೀಧರ್ ಏಕಾಂಗಿ ಧರಣಿ
“ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಕಾರ್ಯಾಲಯದ ಮುಂದೆ ಎಲ್ಲ ಫಲಾನುಭವಿಗಳನ್ನು ಕರೆದುಕೊಂಡು ತೀವ್ರ ಚಳವಳಿ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾ ಮುಖಂಡ ಹನುಮಂತಪ್ಪ ಮನ್ನಾಪುರ, ಹೊನ್ನಪ್ಪ ಗುಂಡುಗುರ್ತಿ, ಲಕ್ಷ್ಮಣ ಮಸರಕಲ್, ಆಂಜನೇಯ, ಯಲ್ಲಪ್ಪ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
