ಮಾಜಿ ದೇವದಾಸಿಯರ ಬಾಕಿ ಪಿಂಚಣಿ ಮಂಜೂರು ಮಾಡಬೇಕು ಹಾಗೂ ಮನೆ ನಿರ್ಮಾಣ ಸಂಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಯಚೂರು ಜಿಲ್ಲಾ ಸಮಿತಿಯಿಂದ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ರಾಯಚೂರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ದೇವದಾಸಿ ವಿಮೋಚನಾ ಮಹಿಳೆಯರು ಘೋಷಣೆ ಕೂಗುವ ಮೂಲಕ ಆಗ್ರಹಿಸಿದರು.
ದೇವದಾಸಿ ವಿಮೋಚನಾ ಸಂಘದಿಂದ ಅನೇಕ ವರ್ಷಗಳ ಹೋರಾಟದ ಫಲವಾಗಿ ರಾಯಚೂರು ತಾಲೂಕಿನ 206 ಮಾಜಿ ದೇವದಾಸಿಯರಿಗೆ ಪುನರ್ ವಸತಿ ಕಲ್ಪಿಸಲು ನಗರದ ಸರ್ವೆ ನಂಬರ್ 1403ರ 5 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಮನೆ ನಿರ್ಮಾಣಕ್ಕೆ ₹6.50 ಲಕ್ಷದ ಪೈಕಿ ₹2.50 ಲಕ್ಷ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನೀಡಲಾಗಿತ್ತು. ಫಲಾನುಭವಿಗಳು ₹56 ಸಾವಿರ ವಂತಿಗೆ ಹಾಗೂ ಉಳಿದ ಮೊತ್ತ ಸಾಲದ ರೂಪದಲ್ಲಿ ಫಲಾನುಭವಿಗಳೇ ಭರಿಸಲು ಹೇಳಲಾಗಿತ್ತು. ಆದರೆ, ಮಾಸಿಕ ₹1,500 ಪಿಂಚಣಿ ಪಡೆದು ಸರ್ಕಾರದ ಮೇಲೆ ಅವಲಂಬನೆಯಾಗಿರುವ ಫಲಾನುಭವಿಗಳಿಂಧ ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ದೂರಿದರು.
ಸರ್ಕಾರವೇ ಮನೆ ನಿರ್ಮಾಣದ ಸಂಪೂರ್ಣ ವೆಚ್ಚ ಭರಿಸಬೇಕು. ಮನೆಗಳ ನಿರ್ಮಾಣ ಕಾರ್ಯ ವೇಗವಾಗಿ ಪೂರ್ಣಗೊಳಿಸಬೇಕು. 3 ತಿಂಗಳ ಬಾಕಿ ಇರುವ ಪಿಂಚಣಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ಗೌರವ ಅಧ್ಯಕ್ಷ ಕೆ.ಜಿ ವೀರೇಶ, ತಾಲ್ಲೂಕು ಘಟಕದ ಅಧ್ಯಕ್ಷೆ ಜಮಲಮ್ಮ, ಮಹಾದೇವಿ ಮತ್ತಿತರರು ಇದ್ದರು.
