ತುಂಗಭದ್ರ ಎಡದಂಡೆ ಮತ್ತು ನಾರಾಯಣಪುರು ಬಲದಂಡೆ ಕಾಲುವೆ ಕೊನೆಭಾಗದ ರೈತರಿಗೆ ನೀರು ಬರದೆ ರೈತರು ಆರ್ಥಿಕ ಸಂಕಷ್ಟ ಗುರಿಯಾಗುವಂತಾಗಿದ್ದು, ಗೂಗಲ್ ಬ್ಯಾರೇಜ್‌ನಿಂದ ಕೊನೆಭಾಗಕ್ಕೆ ನೀರು ಒದಗಿಸಲು ಸರ್ಕಾರ ಮುಂದಾಗ ಬೇಕು ಇಲ್ಲವಾದಲ್ಲಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.
ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಕರ್ನಾಟಕರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ತುಂಗಭದ್ರ ಎಡದಂಡೆ ಕಾಲುವೆ ಮಾನವಿಯಿಂದ ರಾಯಚೂರು ತಾಲೂಕಿನವರೆಗೆ ನೀರೇ ಬರುತ್ತಿಲ್ಲ. ಅದೇ ಸ್ಥಿತಿ ನಾರಾಯಣಪುರು ಬಲದಂಡೆ ಕಾಲುವೆಯಲ್ಲಿಯೂ ಪ್ರಾರಂಭವಾಗಿದೆ. ಗೂಗಲ್ ಬ್ಯಾರೇಜ್‌ನಿಂದ ತುಂಗಭದ್ರ ಎಡದಂಡೆ ಕಾಲುವೆ ಹಾಗೂ ನಾರಾಯಣಪುರು ಬಲದಂಡೆಗೆ ಕಾಲುವೆ ನೀರು ಹರಿಸಿ ರೈತರಿಗೆ ನೆರವಾಗಿ, ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಜಾನುವಾರುಗಳಿಗೆ ನೀರು ಕೊಡಲು ಕೆರೆಗಳನ್ನು ಭರ್ತಿ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೊಪ್ಪಳ, ಗಂಗಾವತಿಯಿಂದ ಹಿಡಿದು ಸಿಂಧನೂರುವರೆಗೆ ಎಡದಂಡೆ ಕಾಲುವೆ ನೀರು ಯಥೇಚ್ಚವಾಗಿ ಹರಿಯುತ್ತಿದೆ. ಮಾನವಿಯಿಂದ ಮಾತ್ರ ನೀರು ಬರುತ್ತಿಲ್ಲ. ನಿತ್ಯವೂ ರೈತರು ಪ್ರತಿಭಟನೆ ಮಾಡುವಂತಾಗಿದೆ. ಗೂಗಲ್ ಬ್ಯಾರೇಜ್‌ನಿಂದ ನೀರು ಹರಿಸಿದಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತದಂತಾಗುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರ ಘೋಷಣೆಯ ನಂತರವೂ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಮುಂಗಾರು ಮತ್ತು ಹಿಂಗಾರು ಬೆಳೆ ಕಳೆದು ಹೋಗಿದ್ದರಿಂದ ಪ್ರತ್ಯೇಕವಾಗಿ ಎರಡು ಹಂಗಾಮಿನ ಬೆಳೆ ನಷ್ಟ ಪರಿಹಾರ ರೈತರಿಗೆ ಬಿಡುಗಡೆ ಮಾಡಬೇಕು. ಗುಂಜಳ್ಳಿ ಕೆರೆ ಸೇರಿದಂತೆ ರಾಯಚೂರು ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಅವಕಾಶವಿದ್ದು ಭರ್ತಿ ಮಾಡಬೇಕೆಂದರು.
ರೈತ ಮುಖಂಡ ಅಬ್ದುಲ್ ಮಜೀದ್ ಮಾತನಾಡಿ ತುಂಗಭದ್ರ ಮತ್ತು ಕೃಷ್ಣ ನದಿಗಳಲ್ಲಿ ನೀರು ಹರಿದು ಹೋಗುತ್ತಿದೆ. ರೈತರಿಗೆ ದೊರೆಯುತ್ತಿಲ್ಲ. ಸರ್ಕಾರಗಳು ವ್ಯರ್ಥವಾಗಿ ಹರಿಯುವ ನೀರು ಬಳಸಲು ಕೆರೆ ತುಂಬುವದು, ಕುಡಿಯುವ ನೀರಿನ ಸಣ್ಣ ಕೆರೆಗಳನ್ನು ಭರ್ತಿ ಮಾಡಬೇಕೆಂದರು. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಅಕ್ಕಿಯ ಬದಲು ನ್ಯಾಯಬೆಲೆ ಅಂಗಡಿಗಳಲ್ಲಿ ಮೂರು ಕೆಜಿ ಮಾತ್ರ ನೀಡಲಾಗುತ್ತಿದೆ. ಇನ್ನೂ ಪಡಿತರದ ಬದಲು ಅಕ್ಕಿ ನೀಡುವಲ್ಲಿಯೂ ಕೆಲವರಿಗೆ ಇಂದಿಗೂ ಹಣವೂ ಬರುತ್ತಿಲ್ಲ. ಗೃಹ ಲಕ್ಷ್ಮೀ ಯೋಜನೆಯಡಿ ಅನೇಕ ಮಹಿಳೆಯರಿಗೆ ಹಣವೂ ಬರುತ್ತಿಲ್ಲ. ಬರಗಾಲ ಇರುವದರಿಂದ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದರು. ಈ ಸಂದರ್ಭದಲ್ಲಿ ನರಸಿಂಗರಾಜ ಕುಲಕರ್ಣಿ, ಅಕ್ಕಮಹಾದೇವಿ, ರಮೇಶ, ವೀರೇಶ, ದೇವಪ್ಪ ಉಪಸ್ಥಿತರಿದ್ದರು.