ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗೊಬ್ಬುರ ಹೋಬಳಿ ವ್ಯಾಪ್ತಿಯ ಕಾಕರಗಲ್ ಬಳಿಯಿರುವ ಟೋಲ್‌ಗೇಟ್ ತೆರವುಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆ ರಸ್ತಾ ರುಕೊ ಪ್ರತಿಭಟನೆ ನಡೆಸಿತು.
ಕಲ್ಮಲ್‌ನಿಂದ ತಿಂಥಣಿ ಬ್ರಿಡ್ಜ್ ವರೆಗಿನ ರಾಜ್ಯ ಹೆದ್ದಾರಿವರೆಗೆ ಅವೈಜ್ಞಾನಿಕವಾಗಿ ಟೋಲ್‌ಗೇಟ್ ನಿರ್ಮಾಣ ಮಾಡಿ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ. ಕಲ್ಮಲ್ ಮತ್ತು ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಗೆ ಒಳಪಟ್ಟರೂ ತಾಲೂಕಿನಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕಾರ್ಖಾನೆಗಳಾಗಲಿ, ವಾಣಿಜ್ಯ ವ್ಯಾಪಾರಗಳಲೀ ನಡೆಯುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಜನ ಪ್ರತಿನಿಧಿಗಳು 2010ರಲ್ಲಿ 192 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದ್ದ ಅದೇ ರಸ್ತೆಗೆ ಕೆಆರ್‌ಡಿಸಿಎಲ್ ನಿಂದ 70 ಕೋಟಿ ವೆಚ್ಚದಲ್ಲಿ ಪ್ಯಾಚ್ ವರ್ಕ್ ಡಾಂಬರೀಕರಣ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಬಗರೆಹರಿಸುವುದು ಬಿಟ್ಟು ಟೋಲ್ ನಿರ್ಮಿಸಿ ಸಾಮಾನ್ಯ ಜನರಿಂದ ಹಣ ಪೀಕುತ್ತಿದ್ದಾರೆ” ಎಂದು ಸಂಘಟನೆಯ ಸದಸ್ಯರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
“ದೇವದುರ್ಗ ತಾಲೂಕಿನಲ್ಲಿ ಬಹುತೇಕ ಶೇ. 80 ರಷ್ಟು ರೈತರು ಕೂಲಿಕಾರರು ಮತ್ತು ಕಾರ್ಮಿಕರಿಂದ ಕೂಡಿದ್ದು ದಿನನಿತ್ಯ ಹೊಲದ ಕೆಲಸಗಳಿಗೆ ಸಾಮಗ್ರಿ ತರಲು, ಎಣ್ಣೆ, ಗೊಬ್ಬರ, ಬೀಜ, ದವಸ ಧಾನ್ಯಗಳನ್ನು ಮಾರಾಟ ಮಾಡಲು ಹಾಗೂ ಎತ್ತು, ಹಸು, ಕುರಿ, ಖರೀದಿಸಲು ಮಾರಾಟ ಮಾಡಲು ಪಕ್ಕದ ದೇವದುರ್ಗಕ್ಕೆ ಪ್ರತಿದಿನ ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಮತ್ತು ಇಲ್ಲಿ ಯಾವುದೇ ಬೃಹತ್ ಕೈಗಾರಿಕ ಕಂಪನಿಗಳು ಇರುವುದಿಲ್ಲ ಈಗಾಗಲೇ ರೈತರು ಬರಗಾಲ ಬೆಳೆ ನಷ್ಟ ಅತೀವೃಷ್ಟಿ ಮತ್ತು ಬೆಲೆ ಇಳಿಕೆಯಿಂದ ತತ್ತರಿಸಿ ಹೋಗಿದ್ದು ಕೃಷಿ ಕ್ಷೇತ್ರದಲ್ಲಿ ವರ್ಷಕ್ಕಿಂತಲೂ ಈ ವರ್ಷ ತಾಲ್ಲೂಕಿನ ರೈತರು ಬಹಳ ನಷ್ಟದ ಹಂಚಿನಲ್ಲಿದ್ದಾರೆ ಜೊತೆಗೆ ಇಷ್ಟಾದರೂ ಸರಕಾರದ ಅಚಾತುರ್ಯದ ನಿರ್ಧಾರದಿಂದ ಟೋಲ್ ಗೇಟ್ ನಿರ್ಮಿಸಿ ಇಲ್ಲಿನ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಆಕ್ರೋಶಿಸಿದರು.
ಟೋಲ್ ಗೇಟ್ ನಿಂದ ಇನ್ನೊಂದು ಟೋಲ್ ಗೇಟ್ ವರೆಗೂ ನಿರ್ಮಿಸಲು ಸುಮಾರು 50 ರಿಂದ 60 ಕಿ.ಮೀ. ಅಂತರ ಇರಬೇಕು. ಒಂದೇ ರಸ್ತೆ ತಿಂಥಣಿ ಬ್ರಿಜ್ ವರೆಗೆ ಕೇವಲ 73 ಕಿ.ಮೀ. ಅಂತರದಲ್ಲಿ 02 ಟೋಲ್ಲೇಟ್ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಕೂಡಲೇ ರಾಜ್ಯ ಸರಕಾರ ರೈತರಿಂದ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಿ ಟೋಲ್ ಗೇಟನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಸಾಂಕೇತಿಕ ಧರಣಿ ನಡೆಸಿ ಸ್ಥಳಕ್ಕೆ ರಾಯಚೂರು ಸಂಸದರಾದ ಜಿ ಕುಮಾರ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ರಾಯಚೂರು | ಮಾದಕ ವಸ್ತು ಮಾರಾಟ ಜಾಲ ಕಡಿವಾಣಕ್ಕೆ ಮನವಿ
ಈ ವೇಳೆ ರೈತ ಸಂಘದ ರಾಜ್ಯ ಮುಖಂಡ ಚಾಮರಸ ಮಾಲಿ ಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಇಂಗಳದಾಳ, ಬೂದಯ್ಯ ಸ್ವಾಮಿ, ರತ್ನಮ್ಮ ಇನ್ನಿತರರು ಹಾಜರಿದ್ದರು.
