ಶಿಕ್ಷಣ ಸಂಸ್ಥೆಗಳು ಆರ್‌ಎಸ್‌ಎಸ್ ಪ್ರಭಾವದಿಂದಾಗಿ ಕೇಸರಿಕರಣಗೊಳ್ಳುತ್ತಿವೆ ಎಂಬ ವಿಚಾರವು ಸಾಕಷ್ಟು ಚರ್ಚೆಯಲ್ಲಿರುವ ನಡುವೆಯೇ, ಕರ್ನಾಟಕದ ಯಲಬುರ್ಗಾದಲ್ಲಿರುವ ರಾಯಚೂರು ವಿವಿ ಕುಲಪತಿಯವರ ನಡೆಯು ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ವಿಜಯದಶಮಿಯ ಉತ್ಸವದ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಸೋಮವಾರ ಸಂಜೆ ಆರ್‌ಎಸ್‌ಎಸ್ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ರಾಯಚೂರು ವಿವಿ ಕುಲಪತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂಬ ಪೋಸ್ಟರ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ಭಾರೀ ವಿರೋಧ ವ್ಯಕ್ತವಾಗಿದೆ. ಅಲ್ಲದೇ, ಇದು ವಿವಾದಕ್ಕೂ ಎಡೆಮಾಡಿಕೊಟ್ಟಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ವಿಜಯದಶಮಿಯ ಉತ್ಸವದ ಹಿನ್ನೆಲೆಯಲ್ಲಿ ರಾಯಚೂರು ನಗರದಲ್ಲಿ ಸೋಮವಾರ ಸಂಜೆ (14/10/2024) ಪಥಸಂಚಲನ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಯಾಗಿ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಹರೀಶ್ ರಾಮಸ್ವಾಮಿ ಅವರು ಭಾಗವಹಿಸಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. ಕುಲಪತಿಯವರ ಭಾಗವಹಿಸುವಿಕೆಗೆ ಹಲವಾರು ಜನ ಪ್ರಗತಿಪರರು, ಲೇಖಕರು, ಸಾಮಾನ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಯಾದ ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳು, ಈ ರೀತಿಯಲ್ಲಿ ಮತಾಂಧ ಆರ್‌ಎಸ್‌ಎಸ್ ಸಂಘಟನೆಯ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

“ಒಂದು ಸಾಂವಿಧಾನಿಕ ಹುದ್ದೆಯಲ್ಲಿರುವ ರಾಯಚೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಪ್ರೊಫೆಸರ್ ಹರೀಶ್ ರಾಮಸ್ವಾಮಿಯವರು ಒಂದು ಧರ್ಮವನ್ನು ಪ್ರತಿನಿಧಿಸಿ ನಡೆಯುವ ಆರ್‍ಎಸ್ಎಸ್ ಪಥ ಸಂಚಲನದ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಾರೆಂದರೆ ಮೊದಲು ಇವರು ಉಪ ಕುಲಪತಿಯೋ ಅಥವಾ ಸಂಘಪರಿವಾರದ ಕಾರ್ಯಕರ್ತರೋ ಎಂಬುದನ್ನು ಸಾಬೀತು ಪಡಿಸಲಿ” ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ನ. 10ರಂದು ವಿವಿಧ ಸಮುದಾಯಗಳ ಸ್ನೇಹ ಸಮಾವೇಶ; ಪ್ರಶಸ್ತಿ ಪ್ರದಾನ ಸಮಾರಂಭ
“ಸಂಘದ ಮೇಲೆ ಅಷ್ಟೊಂದು ಪ್ರೇಮ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಚಡ್ಡಿ ತೊಟ್ಟು ಅಧಿಕೃತವಾಗಿ ಸಂಘ ಸೇರಿ ತಮ್ಮ ಕುಟುಂಬದ ಪರಂಪರೆಯನ್ನು ಕಾಪಾಡಿಕೊಂಡು ಹೋಗಲಿ. ಆಗ ಯಾವ ಮತ್ತು ಯಾರ ತಕರಾರೂ ಇರುವುದಿಲ್ಲ. ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕಾದ ಮತ್ತು ಸಂವಿಧಾನದ ಜಾತ್ಯತೀತ ಆಶಯಗಳನ್ನು ಎತ್ತಿ ಹಿಡಿಯಬೇಕಾದ ಹುದ್ದೆಯಲ್ಲಿದ್ದು, ಹೀಗೆ ನಡೆದುಕೊಳ್ಳುವುದು ಆ ಸ್ಥಾನಕ್ಕೆ ಎಸಗುವ ದ್ರೋಹವಾಗುತ್ತದೆ.
ಈ ಕುರಿತು ಸಿಂಡಿಕೇಟ್ ಸದಸ್ಯರು ಮತ್ತು ಪ್ರಜ್ಞಾವಂತರು ಮಾತನಾಡದಿರುವುದು ದುರಂತ” ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಈ ದಿನ.ಕಾಮ್‌ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ, ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಹರೀಶ್ ರಾಮಸ್ವಾಮಿ ಅವರು ಸದ್ಯ ಬೆಂಗಳೂರಿನಲ್ಲಿದ್ದು, ಪಥಸಂಚಲನ ಕುರಿತು ವಿರೋಧ, ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾಗವಹಿಸದಿರಲು, ಊರಲ್ಲಿರಲಿಲ್ಲ ಎಂಬ ಸಬೂಬು ಸೃಷ್ಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕುಲಪತಿ ಹುದ್ದೆಯಿಂದ ನಿವೃತ್ತರಾಗಲು ಇನ್ನೂ ಒಂದು ತಿಂಗಳು ಬಾಕಿ ಇರುವುದಾಗಿಯೂ ಜನ ಮಾತನಾಡಿಕೊಳ್ಳುತ್ತಿದ್ದಾರೆ.
