ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದು, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಬೇಕು. ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ಹಿಡಿದು ತಾಲೂಕು ಮಟ್ಟದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಡಬಾರದು ಎಂದು ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. “ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರೆ, ಜನರು ಪಟ್ಟಣಕ್ಕೆ ಅಲೆಯುವುದು ತಪ್ಪಲಿದೆ. ಅಧಿಕಾರಿಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸಬೇಕು” ಎಂದು ತಾಕೀತು ಮಾಡಿದರು.
“ಜನ ಸಂಪರ್ಕ ಸಭೆಯ ಉದ್ದೇಶ, ಗರಿಷ್ಠ ಮಟ್ಟದಲ್ಲಿ ಸ್ಥಳದಲೇ ಸಮಸ್ಯೆಗಳನ್ನು ಪರಿಹರಿಸುವುದು. ಕೆಲವು ಸಮಸ್ಯೆಗಳನ್ನು ಕಾಲ ಮೀತಿಯೊಳಗೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಇದರಿಂದ ಜನರ ಸಮಯ ಹಾಗೂ ಹಣ ಉಳಿತಾಯ ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕೆಲಸ ಮಾಡಬೇಕು” ಎಂದರು.
“ರಸ್ತೆ, ಕುಡಿವ ನೀರು, ಚರಂಡಿ, ವಿದ್ಯುತ್ ಸಮಸ್ಯೆ, ಶಾಲಾ ದುರಸ್ಥಿ, ಅಂಗನವಾಡಿ ಕಟ್ಟಡ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಜನ ಸಂಪರ್ಕ ಸಭೆಗಳನ್ನು ಆಯೋಜಿಸಲಾಗದೆ. ಸಾರ್ವಜನಿಕರು, ರೈತರು ಯಾವಾಗ ಬೇಕಾದರು ನನ್ನನ್ನು ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ಪಡೆಯಬಹುದು” ಎಂದು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ರಾಮರೆಡ್ಡಿ ಪಾಟೀಲ್, ಸಿಡಿಪಿಒ ವೆಂಕಟಪ್ಪ, ಸಮಾಜ ಕಲ್ಯಾಣ ಅಧಿಕಾರಿ ಮಂಜುಳ, ಜೆಡಿಎಸ್ ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ಸಿದ್ದನಗೌಡ ಮೂಡಲಗುಂಡ, ಸಿದ್ದಣ್ಣ ತಾತ ಮುಂಡರಗಿ, ಶಾಲಂ ಉದ್ದಾರ್, ಗೋವಿಂದ ನಾಯಕ ಚಿಕ್ಕಗುಡ್ಡ, ವೆಂಕಣ್ಣಗೌಡ, ಹನುಮಂತ್ರಾಯ ಇತರರಿದ್ದರು.