ನಾರಾಯಣಪುರ ಜಲಾಶಯದಲ್ಲಿ 57 ಟಿಎಂಸಿ ಅಡಿ ನೀರಿನ ಲಭ್ಯತೆ ಇದ್ದರೂ ನೀರು ಹರಿಸದಿರಲು ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರ ರೈತ ವಿರೋಧಿಯಾಗಿದೆ. ಈ ನಿರ್ಧಾರವನ್ನು ಪುನರ್ ಪರಿಶೀಲಿಸಿ ಮೂರು ಬಾರಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಎಚ್ಚರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕೃಷ್ಣಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ರೈತರ ಬೆಳೆಗಳ ರಕ್ಷಣೆ ಮಾಡದೆ ತೆಲಂಗಾಣಕ್ಕೆ ನೀರು ಹರಿಸುವ ಹುನ್ನಾರ ಹೊಂದಿವೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ನಿವಾರಿಸಲು 57 ಟಿಎಂಸಿ ಅಡಿ ನೀರನ್ನು ಕಾಯ್ದಿರಿಸಲಾಗಿದೆ. ಆದರೆ ಈಗಾಗಲೇ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರನ್ನು ನದಿಯ ಮೂಲಕ ತೆಲಂಗಾಣಕ್ಕೆ ಹರಿಸಲಾಗುತ್ತಿದೆ. ಜಿಂದಾಲ್ ಕಂಪನಿಗೂ ನೀರು ಪೂರೈಸಲಾಗುತ್ತಿದೆ. ಆದರೆ ರೈತರ ಬೆಳೆಗಳಿಗೆ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ತೆಲಂಗಾಣದ ಸಚಿವರು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ನೆರೆಯ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಟ್ಟು, ಇಲ್ಲಿನ ರೈತರಿಗೆ ಅನ್ಯಾಯ ಮಾಡುವ ಸರ್ಕಾರದ ಕ್ರಮ ರೈತ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವದುರ್ಗ ತಾಲೂಕೊಂದರಲ್ಲಿಯೇ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಹಾಗೂ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ತೊಗರಿ ಬೆಳೆ ಬೆಳೆಯಲಾಗಿದೆ. ಆದರೆ ಯಾವುದೇ ಬೆಳೆಗಳು ರೈತರ ಕೈಹಿಡಿದಿಲ್ಲ. ಮೆಣಸಿನಕಾಯಿ ಬೆಳೆ ರಕ್ಷಿಸಿಕೊಳ್ಳಲು ನವೆಂಬರ್, ಡಿಸೆಂಬರ್ ಮತ್ತು ಜನವರಿಯಲ್ಲಿ ಮೂರು ಬಾರಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಕೆಬಿಜೆಎನ್ಎಲ್ ಅಧಿಕಾರಿಗಳು ಕೃಷಿ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ತಜ್ಞರೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಪ್ರಚಾರಕ್ಕೆ ಸೀಮಿತವಾಗಿದ್ದು, ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಜಿಲ್ಲೆಯಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದ್ದು, ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ದೂರಿದರು.
ವಿಜಯಪುರ ಜಿಲ್ಲೆಗೆ ಸಚಿವ ಎಂ.ಬಿ. ಪಾಟೀಲ್ ಅವರ ಪ್ರಭಾವ ಬಳಸಿ ಕುಡಿಯುವ ನೀರಿಗಾಗಿ 6ರಿಂದ 7 ಟಿಎಂಸಿ ಅಡಿ ನೀರು ಪಡೆಯಲಾಗಿದೆ. ಇಷ್ಟೊಂದು ಪ್ರಮಾಣದ ನೀರು ಕುಡಿಯಲು ಅಗತ್ಯವಿದೆಯೇ ಎಂಬುದನ್ನು ಜಿಲ್ಲೆಯ ಶಾಸಕರು ಪ್ರಶ್ನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾರಾಯಣಪುರ ಜಲಾಶಯದ ಬಲದಂಡೆ ಮತ್ತು ಎಡದಂಡೆ ಕಾಲುವೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ಕುರಿತು ಸಂಸದರು ಹಾಗೂ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಸ್ಪಂದನೆ ದೊರೆಯದಿದ್ದರೆ ಬೆಂಗಳೂರಿನವರೆಗೂ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರಿನಲ್ಲಿ ನಿಲ್ಲದ ರೈತರ ಆತ್ಮಹತ್ಯೆ ಸರಣಿ, ಪರಿಹಾರ ವಿತರಣೆಯ ಅಂಕಿ-ಅಂಶಗಳಲ್ಲೇ ಗೊಂದಲ!
ಈ ಸಂದರ್ಬದಲ್ಲಿ ಬೂದೆಯ್ಯಸ್ವಾಮಿ, ದೇವರಾಜ ನಾಯಕ, ಶಾಂತಪ್ಪಗೌಡ, ಶಂಕರಪ್ಪ, ಗೋವಿಂದರಾಜ ನಾಯಕ ಇದ್ದರು.





