ಮುಂಗಡವಾಗಿ ಸಾಲ ಪಡೆದಿದ್ದ ಕಾರ್ಮಿಕ ಸರಿಯಾಗಿ ಕೆಲಸಕ್ಕೆ ಬರಲಿಲ್ಲ ಎಂದು ಕೋಪಗೊಂಡಿದ್ದ ಕಾರ್ಖಾನೆಯೊಂದರ ಮಾಲೀಕನೋರ್ವ, ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿ ಜೀತದಾಳಿನಂತೆ ಕೆಲಸ ಮಾಡಿಸಿಕೊಂಡ ಅಮಾನವೀಯ ಘಟನೆ ರಾಮನಗರ ಜಿಲ್ಲೆಯ ಮೆಹಬೂಬ್ ನಗರದಲ್ಲಿ ನಡೆದಿದೆ.
ಮೆಹಬೂಬ್ ನಗರದ ಎಸ್‌ಐಯು ರೇಷ್ಮೆ ಕಾರ್ಖಾನೆಯ ಮಾಲೀಕ ಸೈಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸೈಯ್ಯದ್ ಅಮ್ಜದ್ ಎಂಬುವವರು, ಮೊಹಮ್ಮದ್ ವಸೀಮ್ (24) ಎಂಬ ಕಾರ್ಮಿಕ ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಂಡಿದ್ದಾರೆ.
ಕೆಲಸದ ಅವಧಿ ಮುಗಿದ ನಂತರವೂ ಕೂಡ ಆತನನ್ನು ಮನೆಗೆ ಕಳುಹಿಸದೆ ಕಾರ್ಖಾನೆಯಲ್ಲಿಯೇ ಸರಪಳಿ ಕಟ್ಟಿ ಕೂಡಿ ಹಾಕಿದ್ದು, ಜೀತದಾಳು ರೀತಿ ಹಗಲು ರಾತ್ರಿ ಕೆಲಸ ಮಾಡಿಸಿಕೊಂಡಿದ್ದಾರೆ.
ಸಹ ಕಾರ್ಮಿಕರು ನೀಡಿದ ದೂರಿನ ಮೇರೆಗೆ ರಾಮನಗರ ಪುರ ಠಾಣೆ ಪೊಲೀಸರು ಕಾರ್ಖಾನೆ ಮೇಲೆ ದಾಳಿ ನಡೆಸಿದ್ದು, ಕಾರ್ಖಾನೆಯಲ್ಲಿ ಕೂಡಿ ಹಾಕಲಾಗಿದ್ದ ಕಾರ್ಮಿಕ ವಸೀಮ್‌ನನ್ನು ರಕ್ಷಿಸಿದ್ದಾರೆ. ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಮದ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಬಂಧಿಸಿದ್ದಾರೆ.
ಮುಂಗಡವಾಗಿ ₹1.50 ಲಕ್ಷ ಸಾಲ ಪಡೆದಿದ್ದ ಕಾರ್ಮಿಕ
ಐದು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ ಐಜೂರಿನ ವಾಟರ್ ಟ್ಯಾಂಕ್ ವೃತ್ತದ ನಿವಾಸಿ ವಸೀಮ್, ಮುಂಗಡವಾಗಿ ₹1.50 ಲಕ್ಷ ಸಾಲ ಪಡೆದಿದ್ದರು. ಅನಿವಾರ್ಯ ಕಾರಣದಿಂದ ತಿಂಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಒಂಬತ್ತು ದಿನದ ಹಿಂದೆ ಮತ್ತೆ ಕೆಲಸಕ್ಕೆ ಹೋಗಿದ್ದರು.
ಕೆಲಸಕ್ಕೆ ಬಾರದ ವಸೀಮ್‌ನನ್ನು ಕಂಡು ಕೆಂಡಾಮಂಡಲವಾಗಿದ್ದ ಕಾರ್ಖಾನೆ ಮಾಲೀಕ ಮತ್ತು ಮೇಲ್ವಿಚಾರಕ, ಆತನ ಕಾಲಿಗೆ ಸರಪಳಿ ಕಟ್ಟಿ ಕೂಡಿ ಹಾಕಿದ್ದರು. ಸಾಲ ತೀರುವವರೆಗೂ ಕೆಲಸ ಮಾಡಿಕೊಂಡು ಕಾರ್ಖಾನೆಯಲ್ಲಿಯೇ ಜೀತದಾಳುವಿನಂತೆ ಬಿದ್ದಿರುವಂತೆ ತಾಕೀತು ಮಾಡಿದ್ದರು. ಆತನನ್ನು ಒಂಬತ್ತು ದಿನದಿಂದ ಕೂಡಿ ಹಾಕಲಾಗಿತ್ತು. ಹೊರಗಡೆ ಹೋಗಲು ಸಹ ಬಿಡುತ್ತಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಹಕಾರ್ಮಿಕನ ಸ್ಥಿತಿಗೆ ಮರುಗಿದ್ದ ಇತರ ಕಾರ್ಮಿಕರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ಶಿರಸ್ತೇದಾರ್ ಶಬೀನ್ ತಾಜ್ ಡಿ. 25ರಂದು ಪೊಲೀಸರಿಗೆ ದೂರು ನೀಡಿದ್ದರು. ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದಾಗ, ವಸೀಂನ ಕಾಲಿಗೆ ಸರಪಳಿ ಹಾಕಿರುವುದು ಕಂಡುಬಂದಿದೆ.
“ಕಾರ್ಖಾನೆಯ ಮೇಲೆ ನಾವು ದಾಳಿ ನಡೆಸಿದಾಗ ಕಾರ್ಖಾನೆಯ ರೇಷ್ಮೆ ಬಾಟ್ಲರ್ ಬಳಿ ಕಟ್ಟಿದ್ದ ಸರಪಳಿಯೊಂದಿಗೆ ಕಾರ್ಮಿಕ ಕೆಲಸ ಮಾಡುತ್ತಿದ್ದ. ನಂತರ, ಸರಪಳಿ ತೆಗೆದು ಆತನನ್ನು ರಕ್ಷಿಸಲಾಗಿದೆ. ಆಗ ಕಾರ್ಖಾನೆಯಲ್ಲಿಯೇ ಇದ್ದ ಮಾಲೀಕ ಮತ್ತು ಮೇಲ್ವಿಚಾರಕನನ್ನು ಬಂಧಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಮನಗರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಕಾಶ್ ಎಸ್.ಚನ್ನಾಳ ಹಾಗೂ ಕಂದಾಯ ಇಲಾಖೆ ಶಿರಸ್ತೇದಾರ್ ಶಬೀನ್ ತಾಜ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ರಾಮನಗರ | ಆನೆ ಪಳಗಿಸುತ್ತೇನೆಂದು ಕಾಡಿಗೆ ತೆರಳಿದ್ದ ವ್ಯಕ್ತಿ ಕಾಡಾನೆಗೆ ಬಲಿ
ಕಾರ್ಖಾನೆ ಮೇಲೆ ದಾಳಿ ಮಾಡಿದಾಗ ರೇಷ್ಮೆಗೂಡು ಬೇಯಿಸುವ ಸ್ಥಳದಲ್ಲಿದ್ದ ವಸೀಮ, ನಮ್ಮನ್ನು ಕಂಡ ತಕ್ಷಣ “ನನ್ನನ್ನು ಇಲ್ಲಿಂದ ಪಾರು ಮಾಡಿ” ಎಂದು ಅಂಗಲಾಚಿ ಬೇಡಿಕೊಂಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಇಬ್ಬರು ಆರೋಪಿಗಳ ವಿರುದ್ಧ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ- 1976 & ಐಪಿಸಿ 343( ಅಕ್ರಮ ಬಂಧನ), ಐಪಿಸಿ 374 (ಕಾನೂನುಬಾಹಿರವಾಗಿ ದುಡಿಸಿಕೊಳ್ಳುವುದು) ಹಾಗೂ ಐಪಿಸಿ 34 (ಅಪರಾಧ ಸಂಚು) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಮನಗರ ಪೊಲೀಸರು ತಿಳಿಸಿದ್ದಾರೆ.