ಆದಾಯ ಸಂಗ್ರಹ ಮಾಡಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಬೇಕಾದ ಅಧಿಕಾರಿಗಳು 20 ವರ್ಷದಿಂದ ಅಂಗಡಿಗಳ ಹರಾಜು ಮಾಡದೆ, ಅಸಡ್ಡೆ ತೋರಿದ್ದಾರೆಂದು ಹಾರೋಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಆರೋಪಿಸಿದ್ದಾರೆ.
“ರಾಮನಗರ ಜಿಲ್ಲೆ ಹಾರೋಹಳ್ಳಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದೆ. ಸುಮಾರು 20 ವರ್ಷಗಳ ಹಿಂದೆ ನಿಗದಿ ಮಾಡಿದ ಬಾಡಿಗೆ ಪಡೆಯುತ್ತಿದೆ. ಈವರೆಗೂ ಹೊಸ ಹರಾಜು ಪ್ರಕ್ರಿಯೆ ಮಾಡಿಲ್ಲ. ಅಧಿಕಾರಿಗಳು ಕೇವಲ ಸಾಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
2003ರಲ್ಲಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಆದ ಸಮಯದಲ್ಲಿ ಹರಾಜು ಪ್ರಕ್ರಿಯೆ ನಡೆಸಿ ನಿಗದಿಪಡಿಸಿದ್ದ ₹700ರಿಂದ ₹800 ಬಾಡಿಗೆ ಹಣವನ್ನೇ ಇಂದಿಗೂ ತೆರಿಗೆಯಾಗಿ ವಸೂಲಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
“ಹಾರೋಹಳ್ಳಿ ಪಟ್ಟಣದಲ್ಲಿ 262 ವಾಣಿಜ್ಯ ಮಳಿಗೆಗಳಿದ್ದು, ಅದರಲ್ಲಿ 126 ಮಳಿಗೆಗಳು ಸುಸ್ಥಿಯಲ್ಲಿವೆ. ಅವುಗಳಿಗೆ ತಿಂಗಳಿಗೆ ₹12,000ದಿಂದ ₹15,000 ಹಣ ಬಾಡಿಗೆ ಪಡೆದುಕೊಳ್ಳಬೇಕಿತ್ತು. ಆದರೆ, ಹಿಂದೆ ನಿಗದಿಪಡಿಸಿದ ಬಾಡಿಗೆ ದರ ಪಡೆದುಕೊಂಡು ಪಟ್ಟಣ ಪಂಚಾಯತ್ ಬೊಕ್ಕಸಕ್ಕೆ ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಎಸ್‌ಸಿ, ಎಸ್‌ಟಿ, ಕುಂದುಕೊರತೆ ಸಭೆಯಲ್ಲಿ ಸದಸ್ಯರು ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕುರಿತು ಸಭೆಯಲ್ಲಿ ಚರ್ಚೆ ಮಾಡಿ ಸೂಕ್ತ ಕ್ರಮ ವಹಿಸುವಂತೆ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರೂ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ” ಎಂದು ಜಾಗೃತಿ ಸಮಿತಿ ಸದಸ್ಯರ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಕಿಮ್ಸ್ ನಿರ್ದೇಶಕ ಸ್ಥಾನಕ್ಕೆ ಪೈಪೋಟಿ
ಸುಮಾರು 20 ವರ್ಷಗಳಿಂದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಮಾಡದೆ ಅಧಿಕಾರಿಗಳು ಪ್ರಭಾವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅನೈತಿಕವಾಗಿ ವಸೂಲಿ ಮಾಡುತ್ತಿದ್ದಾರೆ” ಎಂದು ಸಾರ್ವಜನಿಕರು ದೂರಿದ್ದಾರೆ.
ಜಿಲ್ಲಾಧಿಕಾರಿ ಕೂಡಲೇ ಗಮನಹರಿಸಿ ತೆರಿಗೆ ಸೋರಿಕೆ ತಡೆಗಟ್ಟಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.