ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿ ಹೊಡೆದಿದ್ದು, ತಂದೆ, ಮಗ ಇಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್ ಬಳಿ ಮಂಗಳವಾರ(ಜೂನ್ 4) ರಾತ್ರಿ ನಡೆದಿದೆ.
ಜು. 4ರಂದು ರಾತ್ರಿ 10 ಗಂಟೆಯ ಸುಮಾರಿಗೆ ಪ್ರವೀಣ್ ಕುಮಾರ್ ಅವರು ತಮ್ಮ ಪುತ್ರನೊಂದಿಗೆ ಉತ್ತರ ಪ್ರದೇಶದ ಮೀರತ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಟ್ರಕ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ.
ಟ್ರಕ್ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವೀಣ್ ಕುಮಾರ್ ಕಾರು ಅಪಘಾತಕ್ಕೀಡಾಗಿರುವುದು ಇದು ಎರಡನೇ ಬಾರಿ. 2007 ರಲ್ಲಿ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿ ಗಾಯಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಜನಾಂಗೀಯ ದ್ವೇಷ, ರಾಹುಲ್ ಕ್ರಿಕೆಟ್ ಆಟದ ಬಗ್ಗೆ ಮಾತನಾಡಿದ ರಿಷಿ ಸುನಕ್
“ನನ್ನ ಸೋದರಳಿಯನನ್ನು ಡ್ರಾಪ್ ಮಾಡಲು ಮೀರತ್‌ಗೆ ಹೋಗಿದ್ದೆ. ಹಿಂತಿರುಗುವಾಗ ರಾತ್ರಿ 9.30 ರ ಸುಮಾರಿಗೆ ನನ್ನ ಕಾರಿಗೆ ಹಿಂದಿನಿಂದ ಬೃಹತ್ ಟ್ರಕ್ ಡಿಕ್ಕಿ ಹೊಡೆದಿದೆ. ದೇವರಿಗೆ ಧನ್ಯವಾದಗಳು. ಅದು ಒಂದು ದೊಡ್ಡ ಕಾರಾಗಿತ್ತು. ಇಲ್ಲದಿದ್ದರೆ ನನಗೆ ತೊಂದರೆಯಾಗುತ್ತಿತ್ತು. ನಾನು ಆರಂಭದಲ್ಲಿ ಕೇವಲ ಬಂಪರ್ ಮುರಿದುಹೋಗುತ್ತದೆ ಎಂದು ಭಾವಿಸಿದ್ದೆ. ಆದರೆ ಕಾರಿಗೆ ಕೆಟ್ಟದಾಗಿ ಹಾನಿಯಾಗಿದೆ” ಎಂದು ಪ್ರವೀಣ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರವೀಣ್ ಕುಮಾರ್ ಅವರ ಕಾರು ಮೀರತ್‌ನ ಆಯುಕ್ತರ ನಿವಾಸದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಆದರೆ ಇಬ್ಬರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ, ಭಾರತ ತಂಡದ ಪ್ರಮುಖ ಆಟಗಾರರಾದ ರಿಷಬ್ ಪಂತ್ ಅವರು ದೆಹಲಿ ಹಾಗೂ ಡೆಹ್ರಾಡೂನ್ ಹೆದ್ದಾರಿಯಲ್ಲಿ ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಿದ್ದೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಪರಿಣಾಮ ರಿಷಬ್ ಪಂತ್ ಅವರು ತೀವ್ರವಾಗಿ ಗಾಯಗೊಂಡಿದ್ದರು. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.