ನಿವೃತ್ತ ಎಎಸ್‌ಐ ಮೇಲೆ ಪುಂಡರ ಗುಂಪೊಂದು ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ರಾಮನಗರ ತಾಲೂಕಿನ ಲಕ್ಕೋಜನಹಳ್ಳಿಯಲ್ಲಿ ನಡೆದಿದೆ.
ಕಾಡನಕುಪ್ಪೆಯ ಕೃಷ್ಣಯ್ಯ ಎಂಬುವವರು ಹಲ್ಲೆಗೊಳಗಾದವರು. ಅವರ ಕೈಗೆ ಗಾಯವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಲಕ್ಕೋಜಹಳ್ಳಿಯ ಮಹದೇವ, ಕಿರಣ, ಚನ್ನೇನಹಳ್ಳಿಯ ಹನುಮ ಹಾಗೂ ಮತ್ತೊಬ್ಬನ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ಣಯ್ಯ ಅವರ ಸಹೋದರ ಈಶ್ವರ ಮತ್ತು ಪತ್ನಿ ತಮ್ಮ ಜಮೀನಿನಲ್ಲಿ ಶುಕ್ರವಾರ ಸಂಜೆ ದನ ಮೇಯಿಸುತ್ತಿದ್ದಾಗ, ಮಹದೇವ ಮತ್ತು ಆತನ ಸಹಚರರು ಕಾರಿನಲ್ಲಿ ಬಂದು ಜಮೀನಿನಲ್ಲಿ ಮದ್ಯ ಸೇವಿಸುತ್ತಿದ್ದರು. ಈ ಕುರಿತು ಪ್ರಶ್ನಿಸಿದ ಈಶ್ವರ್ ಮತ್ತು ಪತ್ನಿ ಮೇಲೆ ಪುಂಡರ ಗುಂಪು ಹಲ್ಲೆ ನಡೆಸಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅಣ್ಣ ಕೃಷ್ಣಯ್ಯ ಮಹದೇವನನ್ನು ಪ್ರಶ್ನಿಸಿದ್ದಾರೆ. ಇವರ ಜೊತೆಗೂ ಜಳಗವಾಡಿದ ಗುಂಪು ಹಲ್ಲೆ ನಡೆಸಿದೆ. ಆಗ, ಕೃಷ್ಣಯ್ಯ ಅವರು ನಿಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ಹೇಳಿ, ಬೈಕ್‌ನಲ್ಲಿ ರಾಮನಗರಕ್ಕೆ ಹೊರಡಲು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯದಲ್ಲಿ ಮೂಲ ಸೌಕರ್ಯ ಕೊರತೆ; ವಿದ್ಯಾರ್ಥಿನಿಯರ ಅಳಲು
ಆಗ ಹಿಂಬಾಲಿಸಿಕೊಂಡು ಬಂದಿರುವ ಮಹದೇವ ಮತ್ತು ಸಹಚರರು, ಗ್ರಾಮದ ಮಧ್ಯೆ ಹೋಗುತ್ತಿದ್ದ ಕೃಷ್ಣಯ್ಯ ಅವರನ್ನು ತಡೆದು ಅವಾಚ್ಯವಾಗಿ ನಿಂದಿಸಿ, ಮಾರಕಾಸ್ತ್ರ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಕೃಷ್ಣಯ್ಯ ಅವರು ಕೈ ಅಡ್ಡ ನೀಡಿದಾಗ ಬಲವಾದ ಪೆಟ್ಟು ಬಿದ್ದಿದೆ. ನಂತರ, ಇತರರು ದೊಣ್ಣೆಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಕ್ಷಣ ಕೃಷ್ಣಯ್ಯ ಅವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ ಕುಟುಂಬದವರು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದರು ಎಂದು ಪೊಲೀಸರು ತಿಳಿಸಿದರು.