ಮಣಿಪುರದಲ್ಲಿನ ಹಿಂಸಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ, ಕರ್ನಾಟಕದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಅಮಾನಷ ಘಟನೆ, ಎಐಸಿಸಿ ನಾಯಕ ಡಾ ಮಲ್ಲಿಕಾರ್ಜುನ ಖರ್ಗೆಯವರ ಮೇಲಿನ ವರ್ಣಭೇದ-ಭಾವ ಟೀಕೆ ಮೊದಲಾದವುಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಿ ಜೆ ಸಾಗರ ಮಾನಯ್ಯ) ಬಣ ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಅಂಬೇಡ್ಕರ್ ಭವನದಿಂದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ ಮಾನಯ್ಯ ಸಂಘಟನಾ ಜಿಲ್ಲಾ ಸಂಚಾಲಕ ಎಚ್ ಬಿ ಗಂಗಪ್ಪ ಮತ್ತು ಜಿಲ್ಲಾ ಸಂಘಟನಾ ಸಂಚಾಲಕ ಎಚ್ ಸಿದೇಶ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಮಣಿಪುರದಲ್ಲಿ ಕುಕಿ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಮಾನವ ಸಮಾಜವೇ ತಲೆತಗ್ಗಿಸುವಂತ ಘಟನೆಯಾಗಿದೆ. ಇದನ್ನು ತಡೆಯುವಲ್ಲಿ ಬಿಜೆಪಿ ನೇತೃತ್ವದ ಮಣಿಪುರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ 3 ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೆ ಘರ್ಷಣೆ ನಡೆದಿದ್ದು, ಮೂವರ ಹತ್ಯೆ ನಡೆದಿದೆ. ತಮ್ಮ ನಿವಾಸಗಳಲ್ಲಿ ಮಲಗಿದ್ದ ಮೂವರು ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಬಳಕ ಮಾರಕಾಸ್ತ್ರದಿಂದ ಕೊಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ ತಡೆಯುವಲ್ಲಿ ರಾಜ್ಯ, ಕೇಂದ್ರ ಸರ್ಕಾರ ಸಂಪೂರ್ಣ ವಿಫಲ; ದಸಂಸ ಕಿಡಿ
ಬುದ್ಧ, ಬಸವ, ಡಾ. ಅಂಬೇಡ್ಕರ್ ಅನುಯಾಯಿ ಹಾಗೂ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಕಲ್ಯಾಣ ಕರ್ನಾಟಕದ ಜನರ ಬಗ್ಗೆ ಅಪ್ಪಟ ಹಿಂದುತ್ವವಾದಿ ಮನಸ್ಥಿತಿಯ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಕರಕಲ, ಕಪ್ಪು ಎಂದು ಹೀಯಾಳಿಸಿ ಮಾತನಾಡಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅವರ ಮೇಲೆ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.