ನಕ್ಸಲ್ ಹೋರಾಟಗಾರರಾಗಿ ಗುರುತಿಸಿಕೊಂಡು, ಭೂಗತರಾಗಿದ್ದ ಕೋಟೆಹೊಂಡ ರವಿ ಯಾನೆ ರವೀಂದ್ರ ನೆಮ್ಮಾರ್(41) ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮೂಲಕ ಶನಿವಾರ(ಫೆ.1) ಮುಖ್ಯವಾಹಿನಿಗೆ ಬಂದಿದ್ದಾರೆ.
ಕೋಟೆಹೊಂಡ ರವಿ ಅಲಿಯಾಸ್ ರವೀಂದ್ರ ನೆಮ್ಮಾರ್ ಚಿಕ್ಕಮಗಳೂರು ಎಸ್‌ಪಿ ಕಚೇರಿಗೆ ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯರೊಂದಿಗೆ ಆಗಮಿಸಿದರು. ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ರವೀಂದ್ರ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ನಾಪತ್ತೆಯಾಗಿದ್ದರು. ಈಗ ಮುಖ್ಯವಾಹಿನಿಗೆ ಬರುವ ಮೂಲಕ ರಾಜ್ಯದಲ್ಲಿ ನಕ್ಸಲ್ ಹೋರಾಟ ಅಂತ್ಯವಾಗಿದೆ.

ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಅಮಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಎದುರು ಮುಖ್ಯವಾಹಿನಿಗೆ ಬಂದಿರುವ ರವೀಂದ್ರ ಅವರು, ಬಳಿಕ ಪತ್ರಕರ್ತರೊಂದಿಗೆ ಸುದ್ದಿಗೋಷ್ಠಿ ನಡೆಸಿದರು.
ನಕ್ಸಲ್ ಹೋರಾಟಗಾರರಾಗಿ ಗುರುತಿಸಿಕೊಂಡು, ಭೂಗತರಾಗಿದ್ದ ರವೀಂದ್ರ ಕೋಟೆಹೊಂಡ(41) ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮೂಲಕ ಶನಿವಾರ(ಫೆ.1) ಮುಖ್ಯವಾಹಿನಿಗೆ ಬಂದಿದ್ದಾರೆ. ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ರವೀಂದ್ರ ಈಗ ಮುಖ್ಯವಾಹಿನಿಗೆ ಬರುವ ಮೂಲಕ ರಾಜ್ಯದಲ್ಲಿ ನಕ್ಸಲ್ ಹೋರಾಟ ಅಂತ್ಯವಾಗಿದೆ. pic.twitter.com/i6Wwygmerg
— eedina.com ಈ ದಿನ.ಕಾಮ್ (@eedinanews) February 1, 2025
ರವೀಂದ್ರ ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವರು. ಕಳೆದ 18 ವರ್ಷಗಳಿಂದ ಭೂಗತರಾಗಿದ್ದರು. ಕಳೆದ ತಿಂಗಳು, ಜನವರಿ 8ರಂದು, ಆರು ಮಂದಿ ನಕ್ಸಲ್ ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮುಖ್ಯವಾಹಿನಿಗೆ ಬಂದಿದ್ದರು.
ಜ.8ರಂದು 6 ಮಂದಿ ನಕ್ಸಲ್ ಹೋರಾಟಗಾರರಾದ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರೆಪ್ಪ ಅರೋಲಿ, ಕೆ.ವಸಂತ (ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಮುಖ್ಯವಾಹಿನಿಗೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ಗೃಹಕಚೇರಿ ಕೃಷ್ಣದಲ್ಲಿ ಸಂವಿಧಾನದ ಪ್ರತಿಯನ್ನು ಕೊಟ್ಟು ಎಲ್ಲರನ್ನೂ ಸ್ವಾಗತಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇದನ್ನು ಓದಿದ್ದೀರಾ? ಬಜೆಟ್ 2025 | ಬಿಹಾರಕ್ಕೆ ಭರಪೂರ ಕೊಡುಗೆ, ಚುನಾವಣೆಗಾಗಿ ಎಂದ ವಿರೋಧ ಪಕ್ಷಗಳು, ಆಕ್ರೋಶ
ಈ ತಂಡದಿಂದ ಬೇರ್ಪಟ್ಟಿದ್ದ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿದ್ದು, ರವೀಂದ್ರ ಅವರನ್ನು ಮಾತುಕತೆ ನಡೆಸಿ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಸ್ವ-ಇಚ್ಛೆಯಿಂದ ಮುಖ್ಯವಾಹಿನಿಗೆ ಬಂದಿದ್ದೇನೆ: ರವೀಂದ್ರ ಕೋಟೆಹೊಂಡ
ಮುಖ್ಯವಾಹಿನಿಗೆ ಬಂದ ಬಳಿಕ ಜಿಲ್ಲಾಡಳಿತದೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವೀಂದ್ರ ಕೋಟೆಹೊಂಡ, “ಯಾರದೇ ಬಲವಂತಕ್ಕೆ ಬಂದಿಲ್ಲ. ಸ್ವಇಚ್ಛೆಯಿಂದ ಮುಖ್ಯವಾಹಿನಿಗೆ ಬಂದಿದ್ದೇನೆ” ಎಂದು ತಿಳಿಸಿದ್ದಾರೆ.
“ನಮ್ಮೂರಿನಲ್ಲಿ ರಸ್ತೆ ಅಭಿವೃದ್ಧಿಯಾಗಬೇಕು. ಭೂಮಿ ಇಲ್ಲದವರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು. ಕಾಡಿನ ಉತ್ಪನ್ನಗಳನ್ನು ತರಲು ಅಡ್ಡಿ ಇರಬಾರದು ಎಂಬ ಬೇಡಿಕೆಗಳನ್ನು ಸರ್ಕಾರಕ್ಕೆ ನೀಡಿದ್ದೇನೆ. ಸಮಾಜದ ಮುಖ್ಯವಾಹಿನಿಯಲ್ಲಿ ಮುಂದೆ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಈ ವೇಳೆ ಮಾತನಾಡಿ, “ಶರಣಾಗಿರುವ ರವೀಂದ್ರ ಅವರು ‘ಎ’ ಕೆಟಗರಿಯ ನಕ್ಸಲ್ ಆಗಿದ್ದಾರೆ. ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಅವರಿಗೆ ₹7.50 ಲಕ್ಷ ಸರ್ಕಾರದಿಂದ ಬರಲಿದೆ. ಸರ್ಕಾರದ ಅನುಮತಿ ಪಡೆದು ಮೊದಲ ಹಂತದಲ್ಲಿ ₹3 ಲಕ್ಷ ನೀಡಲಾಗುವುದು. ಬಾಕಿ ಮೊತ್ತವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಅವರು ಬಯಸಿದರೆ ಕೌಶಲ್ಯ ತರಬೇತಿ ನೀಡಲಾಗುವುದು. ಇವರ ಮೇಲೆ ದಾಖಲಾಗಿರುವ ಮೊಕದ್ದಮೆಗಳ ಸಂಬಂಧ ಕಾನೂನು ಪ್ರಕ್ರಿಯೆ ಮುಂದುವರಿಯಲಿದೆ” ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮಾತನಾಡಿ, ‘ರವೀಂದ್ರ ಅವರು ಶರಣಾಗಿದ್ದು, ಅವರ ವಿರುದ್ಧ ಒಟ್ಟು 27 ಪ್ರಕರಣ ದಾಖಲಾಗಿವೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಕರ್ನಾಟಕ ಈಗ ನಕ್ಸಲ್ ಹೋರಾಟದಿಂದ ಮುಕ್ತವಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸದಸ್ಯರಾದ ವಕೀಲ ಕೆ.ಪಿ.ಶ್ರೀಪಾಲ್, ಶಾಂತಿಗಾಗಿ ನಾಗರಿಕರ ವೇದಿಕೆಯ ಕೆ.ಎಲ್.ಅಶೋಕ್, ವಿ.ಎ. ಶ್ರೀಧರ್, ನಗರಗೆರೆ ರಮೇಶ್, ಗೌಸ್ ಮೊಹಿಯುದ್ದೀನ್ ಸೇರಿದಂತೆ ಪ್ರಗತಿಪರ ಹೋರಾಟಗಾರರು ಇದ್ದರು.
