- ಎಸ್ ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಸೋಮಶೇಖರ್ ಅಭಿಪ್ರಾಯ
- ಎಸ್‌ಯುಸಿಐ (ಸಿ) ಪಕ್ಷದ 76ನೇ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮ
ಭ್ರಷ್ಟ, ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರಾಂತಿಕಾರಕ ಹೋರಾಟಗಳ ಅಗತ್ಯವಿದೆ ಎಂದು ಎಸ್ ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಸೋಮಶೇಖರ್ ಅಭಿಪ್ರಾಯಪಟ್ಟರು.
ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ 76ನೇ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಯಾದಗಿರಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಮಾಜದಲ್ಲಿ ಮೂಲಭೂತ ಬದಲಾವಣೆಯ ಅಗತ್ಯವಿದೆ. ಬಂಡವಾಳಶಾಹಿ ವ್ಯವಸ್ಥೆ ಕಿತ್ತೊಗೆಯುವುದರ ಮೂಲಕ ಅವರ ಆಸ್ತಿ ದುಡಿಯುವ ವರ್ಗದ ಕೈ ಸೇರಬೇಕಿದೆ. ಇದಕ್ಕಾಗಿ ದೊಡ್ಡ ಮಟ್ಟದ ಕ್ರಾಂತಿಕಾರಿ ಹೋರಾಟಗಳ ಅಗತ್ಯವಿದೆ” ಎಂದು ಅಭಿಪ್ರಾಯಪಟ್ಟರು.
“ದೇಶದ ಶೋಷಿತ ಮತ್ತು ದುಡಿಯುವ ವರ್ಗ ಪ್ರಸ್ತುತ ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಕೀಯ ಅಧಿಕಾರವು ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಭಾರತದ ಬಂಡವಾಳಶಾಹಿ ವರ್ಗದ ಕೈಗಳಿಗೆ ಹಸ್ತಾಂತರವಾಯಿತು. ಬಳಿಕ ರಾಜಕೀಯ ಪಕ್ಷಗಳು ಬಂಡವಾಳಶಾಹಿ ವರ್ಗದ ಏಜೇಂಟುಗಳಾದವು” ಎಂದು ವಿಶ್ಲೇಷಿಸಿದರು.
“ರಾಜಕೀಯ ಪಕ್ಷಗಳು ಧರ್ಮದ ಬಗ್ಗೆ ಸಿಕ್ಕಾಪಟ್ಟೆ ಮಾತನಾಡುತ್ತವೆ. ಹಿಂದುತ್ವದ ಹೆಸರಿನಲ್ಲಿ ಕೋಮುವಾದ ಸೃಷ್ಟಿಸುತ್ತಿದ್ದಾರೆ. ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರನ್ನು ಎತ್ತಿ ಕಟ್ಟುತ್ತಿರುವ ಬಿಜೆಪಿ, ಬ್ರಿಟಿಷರ ಕೆಲಸವನ್ನು ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ಕೂಡಾ ಹೊರತಾಗಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗುಮಗೇರಿ ಗ್ರಾಮದಲ್ಲಿ ಮತದಾನ ಜಾಗೃತಿ
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಬಿ ಎನ್ ರಾಮಲಿಂಗಪ್ಪ ಮಾತನಾಡಿ, “ಪಕ್ಷದ ಸಂಸ್ಥಾಪಕರಾದ ಶಿವದಾಸ್ ಘೋಷ್ ಅವರು ದೇಶಕ್ಕೆ ನೈಜ ಸ್ವಾತಂತ್ರ್ಯ ಬೇಕೆಂದು ಮನಗಂಡು ಪಕ್ಷ ಸ್ಥಾಪಿಸಿದರು. ಪ್ರಸ್ತುತ ಪಕ್ಷ ಅವರ ವಿಚಾರದ ಆಧಾರದ ಮೇಲೆ ಬಲಿಷ್ಠ ಹೋರಾಟಗಳನ್ನು ಬೆಳೆಸುತ್ತಿದೆ. ಈ ಹಿನ್ನೆಲೆ ಕಾರ್ಮಿಕರು, ರೈತರು ಅರ್ಥ ಮಾಡಿಕೊಳ್ಳಬೇಕಾದ್ದು, ದುಡಿಯುವ ವರ್ಗದ ನೈಜ ಕಮ್ಯುನಿಸ್ಟ್ ಪಕ್ಷದ ಕಟ್ಟಿ ಬೆಳೆಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಡಿ ಉಮಾದೇವಿ, ಬಿ ಎನ್ ರಾಮಲಿಂಗಪ್ಪ ಹಾಗೂ ಪಕ್ಷದ ಕಾರ್ಯಕರ್ತರಾದ ರಾಚನಗೌಡ, ಭೀಮರೆಡ್ಡಿ, ಬಿ ಕೆ ಶಿಲ್ಪಾ, ಬಿ ಕೆ ಸುಭಾಷ್ ಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.