ರಾಮಮಂದಿರದ ಬಗ್ಗೆ ಶಿಕ್ಷಕಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳೂರಿನ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ.
ತರಗತಿಯಲ್ಲಿ ಅಯೋಧ್ಯೆಯ ರಾಮಮಂದಿರ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಕೆಲವು ಮಕ್ಕಳ ಪೋಷಕರೊಂದಿಗೆ ಸೇರಿ ಸಂಘಪರಿವಾರದ ಕಾರ್ಯಕರ್ತರು ಮುತ್ತಿಗೆಗೆ ಯತ್ನಿಸಿದ್ದಾರೆ.
ಈ ಆರೋಪದ ಬಗ್ಗೆ ಪೋಷಕರೊಬ್ಬರು ಮಾಡಿರುವ ಆಡಿಯೋ ವೈರಲ್ ಆಗಿದೆ. ವೈರಲ್ ಆಡಿಯೋ ಸಂದೇಶದ ಮೇರೆಗೆ ಕೆಲವು ವಿದ್ಯಾರ್ಥಿಗಳ ಪೋಷಕರು ಹಾಗೂ ಸಂಘಪರಿವಾರದ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಶಾಲಾ ಆವರಣದಲ್ಲಿ ಸೇರಬೇಕಾಗಿ ಸಂದೇಶ ರವಾನಿಸಲಾಗಿದ್ದು, ಆಡಿಯೋ ಹಾಗೂ ಸಂದೇಶ ವೈರಲ್ ಹಿನ್ನೆಲೆ ಶಾಲೆಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಅದರಂತೆ, ಶಾಲಾ ಆವರಣದಲ್ಲಿ ಸಂಘಪರಿವಾರದ ಕಾರ್ಯಕರ್ತರು ಜಮಾವಣೆಯಾಗಿದ್ದರು. ಶನಿವಾರ ಮಧ್ಯಾಹ್ನ ಬಳಿಕ ಶಾಲೆ ಬಂದ್ ಆಗಿದ್ದರೂ ಕೆಲ ಪೋಷಕರು, ಕಾರ್ಯಕರ್ತರು ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ.
“ಶ್ರೀರಾಮ ಹಾಗೂ ಅಯೋಧ್ಯೆ ಮಂದಿರ ಅವಹೇಳನ ಮಾಡಿರುವ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬಾಕೆ ಶ್ರೀರಾಮ ಕಲ್ಲು ಅಂದಿದ್ದಾರೆ. ಅಯೋಧ್ಯೆಯಲ್ಲಿ ಡೆಕೋರೇಷನ್ ಮಾಡಿದ್ದಾರೆ ಎಂದೆಲ್ಲ ಮಕ್ಕಳ ಮುಂದೆ ಹೇಳುವ ಮೂಲಕ ಧರ್ಮಗಳ ಬಗ್ಗೆ ವಿಷಬೀಜ ಬಿತ್ತುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿ ಜೊತೆಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪೋಷಕರ ಪ್ರತಿನಿಧಿಗಳು ಹಾಗೂ ಸ್ಥಳೀಯ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಭರತ್ ಎಸ್. ಶಾಲೆಯ ಮುಖ್ಯೋಪಾಧ್ಯಾಯರ ಜೊತೆ ಕೆಲಕಾಲ ಚರ್ಚಿಸಿದರು.
“ಶಾಲೆಯಲ್ಲಿ ಶಿಕ್ಷಕಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಬಗ್ಗೆ ಇದುವರೆಗೂ ಇಂತಹ ಆರೋಪ ಕೇಳಿ ಬಂದಿಲ್ಲ. ಆದರೂ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕಿಯನ್ನು ಮಾತನಾಡಿಸಿ ನಿಜಾಂಶ ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.
ಮಂಗಳೂರು ದಕ್ಷಿಣ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್, “ಪ್ರಕರಣದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಸೋಮವಾರ ಶಾಲೆಯಲ್ಲಿ ಸಭೆ ನಡೆಸಲಿದ್ದಾರೆ. ಶಿಕ್ಷಕಿಯ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಶಾಲಾಡಳಿತ ಮಂಡಳಿ ಮೂರು ದಿನಗಳ ಕಾಲಾವಕಾಶ ಕೇಳಿದೆ. ಶಿಕ್ಷಕಿ ತಪ್ಪೆಸಗಿರುವುದು ಬಿಇಓ ವಿಚಾರಣೆ ವೇಳೆ ಸಾಬೀತಾದರೆ ಕ್ರಮ ವಹಿಸಲಿದ್ದೇವೆ” ಎಂದು ಪೋಷಕರಿಗೆ ತಿಳಿಸಿದರು.
ಇದನ್ನು ಓದಿದ್ದೀರಾ? ಅಸ್ಸಾಂ | ಧಾರ್ಮಿಕ ಸಂಕೇತಗಳನ್ನು ತೆಗೆಯುವಂತೆ ಕ್ರಿಶ್ಚಿಯನ್ ಶಾಲೆಗೆ ಆದೇಶಿಸಿದ ಹಿಂದೂ ಸಂಘಟನೆ
ಶಾಲೆಯಲ್ಲಿ ಈ ಬೆಳವಣಿಗೆ ನಡೆದ ಬಳಿಕ ಶಿಕ್ಷಣ ಇಲಾಖೆಯೂ ನಿಗಾ ವಹಿಸಿದೆ. ಡಿಡಿಪಿಐ ಸೂಚನೆ ಮೇರೆಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯರ ಜೊತೆ ಚರ್ಚಿಸಿದರು.
ಇದೇ ವೇಳೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಐವನ್ ಡಿಸೋಜ ಅವರು ಶಾಲೆಗೆ ಭೇಟಿ ನೀಡಿ, ಮುಖ್ಯೋಪಾಧ್ಯಾರ ಜೊತೆ ಈ ಬೆಳವಣಿಗೆ ಬಗ್ಗೆ ಚರ್ಚಿಸಿದರು. ಐವನ್ ಅವರು ಹೊರಡುವಾಗ ಸಂಘಪರಿವಾರದ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಸ್ಥಳದಲ್ಲಿದ್ದ ಪೊಲೀಸರು ತಡೆದರು.