ಆಗಸ್ಟ್/ಸೆಪ್ಟೆಂಬರ್ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟವಾಗಿದ್ದು, karresult.nic.in ಅಂತರ್ಜಾಲ ತಾಣದಲ್ಲಿ ಫಲಿತಾಂಶ ಲಭ್ಯವಿದೆ. ಕಾಲೇಜುಗಳಲ್ಲಿ ಬುಧವಾರ ಬೆಳಗ್ಗೆ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ 41,961 (ಶೇ 35.21) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ದ್ವಿತೀಯ ಪಿಯುಸಿ ಎರಡನೇ ಪೂರಕ ಪರೀಕ್ಷೆಗೆ ಒಟ್ಟು 1,21 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1.19 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 41,961 (ಶೇ 35.21) ವಿದ್ಯಾರ್ಥಿಗಳು ಪಾಸಾಗಿದ್ದಾರೆ. 75,967 ಬಾಲಕರು ಪರೀಕ್ಷೆಗೆ ಹಾಜರಾಗಿದ್ದರು ಇವರ ಪೈಕಿ 24,845 (ಶೇ 32.7)ರಷ್ಟು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆ ಎದುರಿಸಿದ 43,216 ಬಾಲಕಿಯರಲ್ಲಿ 17,116 (ಶೇ 39.61) ರಷ್ಟು ಪಾಸಾಗಿದ್ದಾರೆ.
ಕಲಾ ವಿಷಯದಲ್ಲಿ 61,184 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 22,409 (ಶೇ 36.63) ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಷಯದಲ್ಲಿ 36,279 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇವರಲ್ಲಿ 10,093 (ಶೇ 27.82) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಷಯದಲ್ಲಿ 21,720 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇವರಲ್ಲಿ 9,459 (ಶೇ 43.55) ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಶೇ 35.71ರಷ್ಟಿದ್ದರೆ, ಇಂಗ್ಲಿಷ್ ಮಾಧ್ಯಮದವರ ಪ್ರಮಾಣ ಶೇ. 34.4ರಷ್ಟಿದೆ.
“ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಸೆ. 15ರವರೆಗೆ ಅವಕಾಶ ನೀಡಲಾಗಿದೆ. ಉತ್ತರ ಪತ್ರಿಕೆಯನ್ನು ಸೆ. 16ರಿಂದ 17ರೊಳಗೆ kseab.karnataka.gov.in ಅಂತರ್ಜಾಲ ತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು” ಎಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಸೆ.12 ಸಂಜೆ 4 ಗಂಟೆ ನಂತರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟ
“ಸ್ಕ್ಯಾನಿಂಗ್ ಪ್ರತಿ ಪಡೆದವರಿಗೆ ಮಾತ್ರ ಮರು ಮೌಲ್ಯಮಾಪನಕ್ಕೆ ಹಾಗೂ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಸ್ಕ್ಯಾನಿಂಗ್ ಪ್ರತಿ ಮತ್ತು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸೆ. 16ರಿಂದ 18ರವರೆಗೆ ಅವಕಾಶವಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ₹530 ಹಾಗೂ ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ ₹1,670 ಶುಲ್ಕ ಪಾವತಿಸಬೇಕು” ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ.
ರಾಜ್ಯದ ಒಟ್ಟು 274 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬೆಂಗಳೂರಿನಲ್ಲಿ 10 ಶಿಬಿರಗಳಲ್ಲಿ ನಡೆದಿತ್ತು.