ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಸಲಹಾ ಸಮಿತಿ ಸದಸ್ಯರಾಗಿದ್ದ ಮತ್ತು ಸನ್ಮಾರ್ಗ ಪತ್ರಿಕೆಯ ಸಂಸ್ಥಾಪಕ ಸದಸ್ಯ ಹಿರಿಯ ನಾಯಕ ಕೆ.ಎಂ. ಶರೀಫ್ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮಂಗಳೂರಿನ ಬಂದರ್ ಸಮೀಪದ ಕಂದಕ್‌ನಲ್ಲಿ ಹುಟ್ಟಿ ಬೆಳೆದ ಇವರು, ಸನ್ಮಾರ್ಗ ವಾರ ಪತ್ರಿಕೆಯ ಸ್ಥಾಪಕರಲ್ಲಿ ಓರ್ವರಾಗಿದ್ದರು. ಇವರು ಸನ್ಮಾರ್ಗ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿದ್ದ ಇಬ್ರಾಹೀಮ್ ಸಈದ್ ಅವರ ಅಣ್ಣನಾಗಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಸ್ಥಾನೀಯ ಘಟಕಕ್ಕೆ 20 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‌ನ ಪ್ರಥಮ ಚೇರ್ಮನ್ ಆಗಿಯೂ ಕರ್ತವ್ಯ ನಿಭಾಯಿಸಿದ್ದರು. 1978ರಲ್ಲಿ ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸುವುದಕ್ಕೆ ಮತ್ತು ಅದರ ಬೆಳವಣಿಗೆಗೆ ಶಕ್ತಿಮೀರಿ ಪ್ರಯತ್ನಿಸಿದವರಲ್ಲಿ ಇವರು ಒಬ್ಬರಾಗಿದ್ದಾರೆ. ಕೆಲವೇ ಕೆಲವು ಗೆಳೆಯರನ್ನ ಒಟ್ಟು ಸೇರಿಸಿ ಪ್ರತಿಯೊಬ್ಬರೂ ತಲಾ 500 ರೂಪಾಯಿಯಂತೆ ಹೂಡಿಕೆ ಮಾಡಿ ಸನ್ಮಾರ್ಗ ಪತ್ರಿಕೆಯನ್ನು ಸ್ಥಾಪಿಸಲಾಗಿತ್ತು ಮತ್ತು ಅದರ ಹಿಂದಿನ ಚಾಲಕ ಶಕ್ತಿಯಾಗಿ ಗುರುತಿಸಿಕೊಂಡಿದ್ದರು.
ತೊಕ್ಕೊಟ್ಟು ಬಬ್ಬುಕಟ್ಟೆಯಲ್ಲಿರುವ ಹಿರಾ ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕ ಚೇರ್ಮೆನ್ ಆಗಿದ್ದ ಇವರು ಸಮರ್ಥ ನಾಯಕತ್ವ, ದೂರ ದೃಷ್ಟಿ ಮತ್ತು ಸಂಘಟನಾ ಚಾತುರ್ಯವನ್ನು ಹೊಂದಿದ್ದರು.
ಇವರು ಪತ್ನಿ, ಐದು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ. ಇವರ ಪುತ್ರರಾದ ಅಷ್ಪಾಕ್ ಅಹಮದ್ ಶರೀಫ್ ಅವರು ಈ ಹಿಂದೆ ಎಸ್ಐಒ ರಾಷ್ಟ್ರಾಧ್ಯಕ್ಷರಾಗಿದ್ದರು. ಹಾಗೆಯೇ ಔರಾ ಮಾಸಿಕದ ಸಂಪಾದಕಿಯಾಗಿರುವ ಸಮೀನಾ ಆಫ್ಶಾನ್ ಇವರ ಮಗಳಾಗಿದ್ದಾರೆ. ಸನ್ಮಾರ್ಗದ ಉಪಸಂಪಾದಕರಾಗಿದ್ದ ಮತ್ತು ಉತ್ತಮ ಬರಹಗಾರರಾಗಿಯೂ ಭಾಷಣಗಾರರಾಗಿಯೂ ಗುರುತಿಸಿಕೊಂಡಿರುವ ಬಿ.ಎಸ್. ಶರ್ಫುದ್ದೀನ್ ಇವರ ಅಳಿಯರಾಗಿದ್ದಾರೆ.
ಇದನ್ನು ಓದಿದ್ದೀರಾ? ಶಾಸಕ ರೈ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಗಡೀಪಾರಿಗೆ ಕ್ರಮ: ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕ ಆಕ್ರೋಶ
ಕೆ.ಎಂ. ಶರೀಫ್ ಅವರ ನಿಧನಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಅಧ್ಯಕ್ಷ ಬೆಳಗಾಮಿ ಮುಹಮ್ಮದ್ ಸಾದ್, ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಅಕ್ಬರ್ ಅಲಿ ಉಡುಪಿ, ನಗರಾಧ್ಯಕ್ಷ ಕೆ.ಎಂ. ಅಶ್ರಫ್, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸಯೀದ್ ಇಸ್ಮಾಈಲ್, ಪ್ರಕಾಶಕ ಅಮೀನ್ ಅಹ್ಸನ್, ಅನುಪಮ ಸಂಪಾದಕಿ ಶಹನಾಝ್ ಎಂ, ಮೌಲಾನಾ ಯಹ್ಯಾ ತಂಙಳ್ ಮದನಿ ಸಹಿತ ಅನೇಕರು ಸಂತಾಪ ಸೂಚಿಸಿದ್ದಾರೆ.
ಬುಧವಾರ ಬೆಳಗ್ಗೆ 10 ಗಂಟೆಗೆ ಅಂತಿಮ ಸಂಸ್ಕಾರ ಕಾರ್ಯವು ಮಂಗಳೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
