- ಅವಹೇಳನಕಾರಿಯಾಗಿ ಕಮೆಂಟ್ ಆರೋಪಿಸಿ ದೂರು ನೀಡಿದ್ದ ಕಾಂಗ್ರೆಸ್‌ನ ಸೌಗಂಧಿಕಾ ರಘುನಾಥ್
- ಯುವ ಬ್ರಿಗೇಡ್ ಸಂಸ್ಥಾಪಕನ ವಿರುದ್ಧ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಅವಹೇಳನಕಾರಿಯಾಗಿ ಕಮೆಂಟ್ ಮಾಡಿರುವ ಆರೋಪದ ಮೇಲೆ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 504 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ಆ. 24ರಂದು ಕಾಂಗ್ರೆಸ್ ರಾಜ್ಯ ಸಾಮಾಜಿಕ ಜಾಲತಾಣದ ಸಂಚಾಲಕಿ ಸೌಗಂಧಿಕಾ ರಘುನಾಥ್ ದೂರು ದಾಖಲಿಸಿದ್ದರು.
ಚಂದ್ರಯಾನ 3 ಯಶಸ್ವಿ ಆಗಲಿ ಎಂದು ಚಕ್ರವರ್ತಿ ಸೂಲಿಬೆಲೆ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಈ ಪೋಸ್ಟಿಗೆ ಕಮೆಂಟ್ ಮಾಡಿದ್ದ ಸೌಗಂಧಿಕಾ ರಘುನಾಥ್, ”ದೇವಸ್ಥಾನಕ್ಕೆ ಪೂಜೆ ಮಾಡೋದು ತಪ್ಪಲ್ಲ. ಆದರೆ ಫೊಟೋ ಹಾಕಿ ಅಂತ ಹೇಳಿರೋದು ತಪ್ಪು. ವಿಜ್ಞಾನಿಗಳ ಪರಿಶ್ರಮ ಫಲಿಸಲಿ ಎಂದು ಬೇಡಿಕೊಂಡರೆ ಸಾಕು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದಕ್ಕೆ ಚಕ್ರವರ್ತಿ ಸೂಲಿಬೆಲೆ, “ನಿನಗೆ ಎಲ್ಲಿ ಯಾಕೆ ಉರಿ ಬಂತೋ ಗೊತ್ತಿಲ್ಲ” ಎಂದು ಕಾಮೆಂಟ್ ಹಾಕಿದ್ದರು. ಈ ಕಾರಣಕ್ಕೆ ಫೇಸ್ಬುಕ್ನಲ್ಲಿ ಅವಾಚ್ಯವಾಗಿ ಕಮೆಂಟ್ ಹಾಕಿದ್ದಾರೆ ಎಂದು ಸೌಗಂಧಿಕಾ ರಘುನಾಥ್ ಆರೋಪಿಸಿದ್ದಾರೆ.

‘ಕಮೆಂಟ್ ಹಾಕಿದ ಬಳಿಕ ಸಾಕಷ್ಟು ಫೇಕ್ ಅಕೌಂಟ್ಗಳಿಂದ ನನ್ನ ತೇಜೋವಧೆಗೆ ಪ್ರಯತ್ನಪಟ್ಟಿವೆ. ನಾನು ಯಾವುದಕ್ಕೂ ಸೊಪ್ಪು ಹಾಕೋದಿಲ್ಲ. ಸ್ವತಃ ಸೂಲಿಬೆಲೆ ಕಮೆಂಟ್ ಮಾಡಿ, ನಿನಗೆ ಏನು ಉರಿಯುತ್ತೆ’ ಎಂದು ಹಾಕಿದ್ದಾರೆ ಎಂದ ಸೌಗಂಧಿಕಾ ಆರೋಪಿಸಿದ್ದಾರೆ.