ಶಿವಮೊಗ್ಗದ ಗಾಂಧಿಬಜಾರ್‌ನ ಎರಡನೇ ತಿರುವಿನಲ್ಲಿರುವ ಉಪ್ಪಾರಕೇರಿ ಬಟ್ಟೆ ಮಾರ್ಕೆಟ್‌ನಲ್ಲಿರುವ ಸ್ಟಾಲ್‌ಗಳಲ್ಲಿ ಕಳೆದ ಸೋಮವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡು ಅನಾಹುತ ಸಂಭವಿಸಿ, ಏಳಕ್ಕೂ ಹೆಚ್ಚು ಅಂಗಡಿಗಳಿಗೆ ನಷ್ಟವುಂಟಾಗಿತ್ತು. ಈ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕೆಂಬ ಆಗ್ರಹ ಕೇಳಿಬಂದಿದೆ.
ಅಗ್ನಿಶಾಮಕ ಸಿಬ್ಬಂದಿಯ ಸಾಹಸದಿಂದಾಗಿ 200ಕ್ಕೂ ಹೆಚ್ಚು ಸ್ಟಾಲ್ ಮಾದರಿ ಅಂಗಡಿಗಳಿರುವ ಬಟ್ಟೆ ಮಾರ್ಕೆಟ್‌ನಲ್ಲಿ ದೊಡ್ಡ ದುರಂತ ಸಂಭವಿಸುವುದು ತಪ್ಪಿತ್ತು. ಸೋಮವಾರ ರಾತ್ರಿ 9:30ರ ಸುಮಾರಿಗೆ ಮುಚ್ಚಿದ್ದ ಮಳಿಗೆಗಳಿಂದ ಹೊಗೆ ಬರುವುದನ್ನ ಗಮನಿಸಿದ ಯುವಕರು ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವ ಮೂಲಕ ದೊಡ್ಡಮಟ್ಟದ ಅವಘಡವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ಘಟನೆ ನಡೆದ ಸ್ಥಳಕ್ಕೆ ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ ಮತ್ತು ತಹಶೀಲ್ದಾರ್ ಮತ್ತು ಮಹಾನಗರ ಪಾಲಿಕೆ ಆಯುಕ್ತರು,ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಯೋಗೇಶ್ ಕೂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

“ಅತೀ ಹೆಚ್ಚು ಬಡ ಮಧ್ಯಮ ವರ್ಗದ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿರುವ ಕಾರಣ ಸೋಮವಾರದ ಘಟನೆಯಿಂದ ಕಂಗಾಲಾಗಿದ್ದು ತಕ್ಷಣ ಪರಿಹಾರ ಒದಗಿಸಿ ಕೊಡಬೇಕು. ಉಸ್ತುವಾರಿ ಸಚಿವರು ಸಾಧ್ಯವಾದಷ್ಟು ಬೇಗ ನಮಗೆ ಪರಿಹಾರ ಒದಗಿಸಿಕೊಡಬೇಕು” ಎಂದು ಬಟ್ಟೆ ಮಾರುಕಟ್ಟೆ ಜವಳಿ ವ್ಯಾಪಾರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಈ.ದಿನ.ಕಾಮ್ ಮೂಲಕ ಅಗ್ರಹಿಸಿದರು.

ಜೆಡಿಎಸ್ ಮುಖಂಡರಾದ ಪ್ರಸನ್ನ ಕುಮಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇಲ್ಲಿ ಬಡ ಮಧ್ಯಮ ವರ್ಗದ ವ್ಯಾಪಾರಸ್ಥರು ಹೆಚ್ಚಾಗಿ ವ್ಯಾಪಾರ ಮಾಡುತ್ತಿದ್ದಾರೆ. ಈ ಪ್ರದೇಶವು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಕಾರಣ ಇವರುಗಳಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು. ವ್ಯಾಪಾರ ಮಾಡುತ್ತಿರುವ ಸ್ಥಳವನ್ನು ಹೊಸದಾಗಿ ನೂತನ ಕಟ್ಟಡ ರೀತಿಯಲ್ಲಿ ಬದಲಾವಣೆ ಮಾಡಬೇಕು” ಎಂದು ಒತ್ತಾಯಿಸಿದರು. ವ್ಯಾಪಾರಸ್ಥರ ಅಳಲು ಆಲಿಸಿ, ಸಾಂತ್ವನ ಹೇಳಿದರು.
ಸ್ಥಳೀಯ ವ್ಯಾಪಾರಸ್ಥ ಮಸ್ತಾನ್ ಮಾತನಾಡಿ, “ಉಪ್ಪಾರಕೇರಿ ಬಟ್ಟೆ ಮಾರ್ಕೆಟ್‌ನಲ್ಲಿ ತುಂಬಾ ಇಕ್ಕಟ್ಟಿನಿಂದ ವ್ಯಾಪಾರ ಮಾಡುತ್ತಿದ್ದೇವೆ. ಸರಿಯಾದ ವ್ಯವಸ್ಥೆ ಇಲ್ಲ. ಹೊಸದಾಗಿ ಒಂದು ಕಾಂಪ್ಲೆಕ್ಸ್ ರೀತಿಯಲ್ಲಿ ಕಟ್ಟಡವನ್ನು ಮಹಾನಗರ ಪಾಲಿಕೆ ವತಿಯಿಂದ ಮಾಡಿ, ಅಲ್ಲಿ ಅನುಕೂಲ ಮಾಡಿಕೊಟ್ಟರೆ ಇನ್ನೂ ಉತ್ತಮವಿತ್ತು. ಜನರು ಕೂಡ ಬರುವಂತಹ ಸ್ಥಳವಾಗಿದ್ದರೆ ಉತ್ತಮ” ಎಂದು ತಿಳಿಸಿದರು.



