ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನಂಬಳ ಗ್ರಾಮದ ಶ್ರೀಮಂತ ಕುಟುಂಬದ ಸಿದ್ದಮ್ಮ, ದುಗ್ಗಪ್ಪಗೌಡ ಅವರ ಮಗನಾದ ಎನ್.ಡಿ ಸುಂದರೇಶ್ ದಿನಾಂಕ 24-08- 1938ರಲ್ಲಿ ಜನ್ಮ ತಾಳಿದವರು. ಇವರು ದಿನಾಂಕ 21-12-1992ರಂದು ಹೃದಯಾಘಾತಕ್ಕೊಳಗಾಗಿ ಅಸುನೀಗಿದರು. ಇವರು ನಮ್ಮನ್ನಗಲಿ 31 ವರ್ಷಗಳಾಗಿವೆ. ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಸ್ಮರಿಸಿಕೊಂಡಿದ್ದಾರೆ
ರಾಷ್ಟ್ರಕವಿ ಕುವೆಂಪು, ಮುಖ್ಯಮಂತ್ರಿಗಳಾಗಿದ್ದ ಕಡಿದಾಳು ಮಂಜಪ್ಪನವರ ಹತ್ತಿರದ ಸಂಬಂಧಿ ಎನ್.ಡಿ ಸುಂದರೇಶ್. ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಇ. ಓದಿ ಅವಕಾಶಗಳಿದ್ದಾಗ್ಯೂ ಸರ್ಕಾರಿ ಕೆಲಸಕ್ಕೆ ಹೋಗದೆ, ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಭದ್ರಾವತಿ ತಾಲ್ಲೂಕಿನ ಅಶೋಕನಗರದಲ್ಲಿ ಕಾಡುಗುಡ್ಡದಂತಿದ್ದ ಕಲ್ಲುಭೂಮಿಯನ್ನು ಬೇಸಾಯಕ್ಕೆ ಅಣಿಗೊಳಿಸಿ ಸುಂದರವಾದ ತೋಟವನ್ನಾಗಿ ಮಾರ್ಪಡಿಸಿಕೊಂಡು ಅಲ್ಲೇ ವಾಸವಿದ್ದು, ಕೃಷಿ ಮಾಡುತ್ತಿದ್ದರು. ಅವರ ಸ್ಮಾರಕವೂ ಕೂಡ ಅವರ ತೋಟದಲ್ಲಿಯೇ ಇದೆ.
ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಅವರು ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಅವಿರೋಧವಾಗಿ ಆಯ್ಕೆಯಾಗಿ ವಿದ್ಯಾರ್ಥಿ ಸಮೂಹವನ್ನು ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ಹೋರಾಟಕ್ಕೆ ಸಜ್ಜುಗೊಳಿಸುತ್ತಿದ್ದರು. ಕಂದಾಚಾರ, ಮೌಢ್ಯ ವಿರೋಧಿಯಾದ ಇವರು ಡಾ. ರಾಮಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ, ರಾಷ್ಟ್ರಕವಿ ಕುವೆಂಪು ವಿಚಾರಗಳ ಪ್ರಭಾವಕ್ಕೊಳಗಾಗಿ ಪ್ರೊ. ಎಂ.ಡಿ.ಎನ್., ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಕಡಿದಾಳ್ ಶಾಮಣ್ಣ, ಯು.ಆರ್. ಅನಂತಮೂರ್ತಿ ಇತರರನ್ನೊಡಗೂಡಿ ರಾಜ್ಯಾದ್ಯಂತ ಸುತ್ತಾಡಿ, ಸಮಾಜವಾದಿ ಯುವಜನ ಸಭಾದಲ್ಲಿ ಕೆಲಸ ಮಾಡಿದವರು. 1972ರಲ್ಲಿ ರೈತಸಂಘ ಕಟ್ಟಿಕೊಂಡು ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸುತ್ತಿದ್ದರು. ಸ್ವತಂತ್ರ ಹೋರಾಟಗಾರ ಹೆಚ್.ಎಸ್. ಭದ್ರಪ್ಪನವರು ಚುನಾವಣಾ ರಾಜಕೀಯದಿಂದ ದೂರವಾಗಿ ಚಳುವಳಿ ರಾಜಕಾರಣದಲ್ಲಿ ಗುರುತಿಸಿಕೊಂಡಾಗ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾಗಿ ರುದ್ರಪ್ಪನವರು ಆಯ್ಕೆಯಾದಾಗ ಆ ಸಂಘಕ್ಕೆ ಎನ್.ಡಿ. ಸುಂದರೇಶ್‌ರವರು ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಬ್ಬು ಬೆಳೆಗಾರರ ಸಂಘ ಕೇವಲ ಕಬ್ಬುಬೆಳೆಗಾರರ ಹಿತಾಸಕ್ತಿಗಾಗಿ ಹೋರಾಟ ಮಾಡದೆ ಸಮಸ್ತ ರೈತರ ಪರ ಹೋರಾಟ ಮಾಡುವಲ್ಲಿ ಎನ್.ಡಿ. ಸುಂದರೇಶ್‌ರವರ ಪಾತ್ರ ಬಹುಮುಖ್ಯವಾಗಿತ್ತು.

ರಾಜ್ಯದಲ್ಲಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 1980 ಜುಲೈ 21ರಂದು ನರಗುಂದ, ನವಲಗುಂದದಲ್ಲಿ ನಡೆದ ರೈತ ಬಂಡಾಯದಲ್ಲಿ ಆಗಿನ ಸರ್ಕಾರ ಚಳುವಳಿ ನಿರತ ರೈತ ಸಮುದಾಯದ ಮೇಲೆ ಗುಂಡು ಹಾರಿಸಿ ರೈತರನ್ನು ಬಲಿ ತೆಗೆದುಕೊಂಡಾಗ ಆ ಘಟನೆಯನ್ನು ಮೊದಲನೆಯದಾಗಿ ಖಂಡಿಸಿದವರು ಎನ್.ಡಿ. ಸುಂದರೇಶ್‌ರವರು. ಅಷ್ಟಕ್ಕೆ ಸುಮ್ಮನಾಗದೆ ರಾಜ್ಯಾದ್ಯಂತ ಚಳುವಳಿಗೆ ಕರೆ ನೀಡಿ ನರಗುಂದ, ನವಲಗುಂದಕ್ಕೆ ಕೆಲ ಸಂಗಡಿಗರ ಜೊತೆ ಹೋಗಿ ಗುಂಡೂರಾವ್ ಸರ್ಕಾರವನ್ನು ಕಟುವಾಗಿ ಟೀಕಿಸಿ, ತದನಂತರ, ರಾಜ್ಯಾದ್ಯಂತ ಸುತ್ತಿ ಗುಂಡೂರಾವ್ ಸರ್ಕಾರದ ವಿರುದ್ದ ಗುಡುಗುತ್ತಾ ಕರ್ನಾಟಕ ರಾಜ್ಯ ರೈತಸಂಘ ಸ್ಥಾಪನೆಗೆ ಕಾರಣರಾದವರಲ್ಲಿ ಎನ್.ಡಿ. ಸುಂದರೇಶ್ ಅಗ್ರಗಣ್ಯರು.
ಕಬ್ಬು ಬೆಳೆಗಾರರ ಸಂಘವನ್ನೇ ಕರ್ನಾಟಕ ರಾಜ್ಯ ರೈತ ಸಂಘ ಎಂದು ಮಾರ್ಪಡಿಸಿ, ಸಂಘದ ಮೊದಲನೇ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿದ್ದರು. ತದನಂತರ ಹೆಚ್.ಎಸ್. ರುದ್ರಪ್ಪನವರ ನೇತೃತ್ವದಲ್ಲಿ ಪ್ರೊ.ಎನ್.ಡಿ.ಎನ್., ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಕಡಿದಾಳ್ ಶಾಮಣ್ಣ, ಪ್ರೊ. ರವಿವರ್ಮಕುಮಾರ್, ಮಂಜುನಾಥ ದತ್ತ, ಆರ್.ಪಿ. ವೆಂಕಟೇಶಮೂರ್ತಿ ಇತರರ ಜೊತೆ ರಾಜ್ಯದ ಹಳ್ಳಿ ಹಳ್ಳಿಗಳನ್ನು ಸುತ್ತಿ ತಾತ್ವಿಕ ನೆಲೆಗಟ್ಟಿನಲ್ಲಿ ಬೃಹತ್ ರೈತಚಳುವಳಿಗೆ ಕಾರಣರಾದರು.
ಈ ನಾಡು ಕಂಡ ಅಪ್ರತಿಮ ಹೋರಾಟಗಾರರಾಗಿದ್ದ ಎನ್.ಡಿ. ಸುಂದರೇಶ್ ಚಳುವಳಿಯಲ್ಲಿ ತಾಯಿ ಹೃದಯದ ನಾಯಕರಾಗಿದ್ದರು. ಯಾವುದೇ ರಾಜಕೀಯ ಆಸೆ ಆಮಿಷಗಳಿಗೆ ಬಲಿಯಾಗದೆ ಚಳುವಳಿ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡು ದುಡಿಯುವ ಜನರ ಸಮಸ್ಯೆಗಳಿಗೆ ಹೋರಾಟದ ಮೂಲಕವೇ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು. ಪ್ರೊ. ರವಿವರ್ಮ ಕುಮಾರ್ ಸುಂದರೇಶ್ ಕುರಿತು ಬರೆದಿರುವ ಲೇಖನವೊಂದರಲ್ಲಿ “ಕರ್ನಾಟಕ ರಾಜ್ಯ ರೈತಸಂಘದ ಇತಿಹಾಸದಲ್ಲಿ ರೈತರು ಕಂಡ ಅತ್ಯಂತ ವರ್ಣರಂಜಿತ ವ್ಯಕ್ತಿತ್ವವೆಂದರೆ ಅದು ಎನ್.ಡಿ. ಸುಂದರೇಶ್ ಅವರದು, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯದ ಉದ್ದಗಲಕ್ಕೆ ಇಷ್ಟು ಪ್ರಬಲವಾಗಿ ರೈತರನ್ನು ಸಂಘಟನೆ ಮಾಡಲಿಕ್ಕೆ ಸಾಧ್ಯ ಮಾಡಿಕೊಟ್ಟಂತಹ ಕಾರಣ ಪುರುಷ ಎನ್.ಡಿ. ಸುಂದರೇಶ್” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
ಲಂಕೇಶ್‌ರವರು ಎನ್.ಡಿ. ಸುಂದರೇಶ್‌ರವರು ನಿಧನರಾದ ನಂತರ ಅವರ ‘ಲಂಕೇಶ್ ಪತ್ರಿಕೆ’ಯಲ್ಲಿ “ಹೃದಯವಂತ ಸುಂದರೇಶ್‌ಗೆ ಹೃದಯಾಘಾತ” ಎಂಬ ಶೀರ್ಷಿಕೆಯಡಿ ಬರೆದ ಲೇಖನ ಅವರ ಒಟ್ಟು ವ್ಯಕ್ತಿತ್ವವನ್ನು ಸಾರುತ್ತಿತ್ತು. ಸುಂದರೇಶ್ ಸಾವಿಗೆ ಸೇರಿದ್ದ ಜನಸಮೂಹ ಬಹುಶಃ ಶಿವಮೊಗ್ಗ ಜಿಲ್ಲೆಯ ಯಾವ ರಾಜಕಾರಣಿ, ಗಾಂಧಿವಾದಿಗಳಿಗೂ ಸೇರಿರಲಿಲ್ಲ. ಒಂದೂವರೆ ದಿವಸವೂ ಸತತವಾಗಿ ಹರಿದು ಬಂದ ಜನಗಳಲ್ಲದೆ ಅರ್ಧ ಕಿ.ಮೀ. ವರೆಗೆ ನಿಂತಿದ್ದ ವಾಹನಗಳನ್ನು ನೋಡಿ ದಂಗು ಬಡಿದ ಜನ ಮಂತ್ರಿಯೋ, ಶಾಸಕನೋ ಅಥವಾ ಇನ್ಯಾವುದೋ ಹುದ್ದೆಯಲ್ಲಿ ಇಲ್ಲದಿದ್ದ ಈ ಸುಂದರೇಶ್‌ಗೆ ಎಷ್ಟು ಜನ ಸೇರಿದ್ದಾರಲ್ಲ, ಎಂದು ಉದ್ಗಾರ ತೆಗೆಯುತ್ತಿದ್ದರು. ರಾಜ್ಯದ ಅತಿ ದೊಡ್ಡ ಸಂಘಟನೆಯಾಗಿದ್ದ ರೈತಸಂಘದಲ್ಲಿ ಬಹಳ ಗಟ್ಟಿಯಾಗಿ ಕೂಗುವ ಶಕ್ತಿ ಪಡೆದಿದ್ದು ಸುಂದರೇಶ್ ಒಬ್ಬರೇ. ಯಾರೊಬ್ಬರು ಎತ್ತಿ ತೋರಿಸಬಹುದಾದ ತಪ್ಪುಗಳನ್ನೇ ಮಾಡದೆ ತುಂಬಾ ಖಚಿತವಾಗಿದ್ದ ಸುಂದರೇಶ್ ತಾವು ನಂಬಿದ್ದ ವಿಚಾರಗಳಿಗಾಗಿ ರಾಜಿ ಮಾಡಿಕೊಳ್ಳಲೇ ಇಲ್ಲ” ಎಂದು ಬರೆದಿದ್ದಾರೆ.

ಹೃದಯವಂತ, ತಾಯಿ ಹೃದಯದ ನಾಯಕನಾಗಿದ್ದ ನಮ್ಮ ಎನ್.ಡಿ. ಸುಂದರೇಶ್ ನಮ್ಮನಗಲಿ 21-12-2023ರಕ್ಕೆ 31 ವರ್ಷಗಳಾಯಿತು. ಇನ್ನೂ ಅವರ ಪ್ರಭಾವ ರೈತ ಚಳುವಳಿಯ ಮೇಲಿದೆ. ಇಂತಹವರು ಕಟ್ಟಿದ ಚಳುವಳಿ ಇನ್ನೂ ತಾತ್ವಿಕ ನೆಲೆಗಟ್ಟಿನಲ್ಲಿ ಹೋರಾಟ ಮಾಡಿ ದುಡಿಯುವ ರೈತ ಸಮುದಾಯಕ್ಕೆ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಇದೇ ಸುಂದರೇಶ್ ಅವರಿಗೆ ನಿಜವಾಗಿ ಸಲ್ಲಿಸುವ ಗೌರವವಾಗುತ್ತದೆ.