ಎಲ್ಲ ವಿಶ್ವವಿದ್ಯಾನಿಲಯ ಮತ್ತು ಪರೀಕ್ಷಾ ಇಲಾಖೆಗಳಂತೆ ದಾವಣಗೆರೆ ವಿಶ್ವವಿದ್ಯಾಲಯ ಕೂಡ ಆಗಾಗ ಪ್ರಮಾದಗಳನ್ನು ಮಾಡಿ ಸುದ್ದಿಯಲ್ಲಿರುತ್ತದೆ. ಈಗ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ಈ ಪರೀಕ್ಷೆಯ ವೇಳೆ ದೊಡ್ಡ ಎಡವಟ್ಟು ಮಾಡಿ ಪೇಚಿಗೆ ಸಿಲುಕಿಕೊಂಡಿದೆ.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಡವಟ್ಟು ನಡೆದಿದ್ದು ಇಂದು (ಆ.6) ನಡೆದ ಬಿ.ಕಾಂ ನ ಇ- ಕಾಮರ್ಸ್ ಪರೀಕ್ಷೆಯಲ್ಲಿ. ಇಂದು ವಿ.ವಿ. ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಡುವ ಬದಲು, ತಯಾರಾಗಿದ್ದ ಉತ್ತರ ಪತ್ರಿಕೆ ಸರಬರಾಜು ಮಾಡಿ ನಗೆಪಾಟಲಿಗೆ ಗುರಿಯಾಗಿದ್ದಾರೆ.
ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವ ಬದಲು ಉತ್ತರ ಇರುವ ಪತ್ರಿಕೆ ನೀಡಿ ಎಡವಟ್ಟು ಮಾಡಿಕೊಂಡಿದ್ದು, ಪ್ರಶ್ನೆಪತ್ರಿಕೆ ಎಂದು ವಿದ್ಯಾರ್ಥಿಗಳ ಕೈಗೆ ಕೊಟ್ಟ ಬಳಿಕವಷ್ಟೇ ವಿಚಾರ ಗೊತ್ತಾಗಿದೆ.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ 90 ಕಾಲೇಜುಗಳ ಪೈಕಿ 15 ಕಾಲೇಜುಗಳಿಗೆ ಪರೀಕ್ಷೆಯಲ್ಲಿ ಈ ತೊಂದರೆ ಉಂಟಾಗಿದೆ. ಈ ಘಟನೆ ನಂತರ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಪ್ರೊ.ರಮೇಶ್ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ದಾವಣಗೆರೆ ವಿವಿ ಪರೀಕ್ಷಾಂಗ ಕುಲ ಸಚಿವ ಪ್ರೊ.ರಮೇಶ್ ಅವರನ್ನು ಮಾತನಾಡಿಸಿದಾಗ, “ಇಂದು ಬಿಕಾಂ ಆರನೇ ಸೆಮಿಸ್ಟರ್ ನ ಇ-ಕಾಮರ್ಸ್ ಪ್ರಶ್ನೆ ಪತ್ರಿಕೆ ನಮ್ಮ ವ್ಯಾಪ್ತಿಯ 90 ಕಾಲೇಜುಗಳ ಪೈಕಿ 15 ಕಾಲೇಜುಗಳಲ್ಲಿ ನಡೆಯುತ್ತಿದ್ದು, ಈ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಬದಲು ಬೋರ್ಡ್ ಆಫ್ ಎಕ್ಸಾಮ್‌ನ ತಪ್ಪಾದ ಕ್ರಮದಿಂದ ಇವ್ಯಾಲುವೇಶನ್‌ನ ಉತ್ತರ ಪತ್ರಿಕೆ ಮುದ್ರಿಸಿಕೊಟ್ಟಿದೆ. ಇದು ಗಮನಕ್ಕೆ ಬಂದ ತಕ್ಷಣವೇ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಯಾರಿಂದ ತಪ್ಪಾಗಿದೆ ಎಂಬುದನ್ನು ಗುರುತಿಸಲಾಗಿದ್ದು, ಈ ಬಗ್ಗೆ ವಿಶ್ವವಿದ್ಯಾನಿಲಯದ ಕಾನೂನಿನ ಪ್ರಕಾರ ಮುಂದಿನ ತನಿಖೆ ಮತ್ತು ಕ್ರಮಕ್ಕೆ ಆದೇಶಿಸಲಾಗಿದೆ. ಮುಂದೂಡಲಾಗಿರುವ ಪರೀಕ್ಷೆಯನ್ನು ನಡೆಸಲು ಸೆಪ್ಟೆಂಬರ್ ನಲ್ಲಿ ಬೇರೆ ದಿನಾಂಕ ಗೊತ್ತುಪಡಿಸಲು ಸಮಾಲೋಚಿಸಲಾಗಿದೆ” ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶೈಕ್ಷಣಿಕ ಸಂಸ್ಥೆಯೊಂದು ಪರೀಕ್ಷೆಗಳಲ್ಲಿ ಈ ರೀತಿ ನಿರ್ಲಕ್ಷ್ಯ ವಹಿಸಿದರೆ ವಿದ್ಯಾರ್ಥಿಗಳ ಭವಿಷ್ಯದ ಗತಿ ಏನು ಎಂದು ಶಿಕ್ಷಣ ತಜ್ಞರು ಮತ್ತು ಪ್ರಜ್ಞಾವಂತ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
