ಮಂಡ್ಯ ಜಿಲ್ಲೆ, ಕೃಷ್ಣರಾಜ ಪೇಟೆ ಪಟ್ಟಣದ ಸಾರ್ವಜನಿಕ ಕಚೇರಿಗಳಿಗೆ ರಾಜ್ಯದ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ ನೀಡಿದಾಗ ಕಂಡು ಬಂದ ಅವ್ಯವಸ್ಥೆ, ಅಧಿಕಾರಿಗಳ ಕರ್ತವ್ಯ ಲೋಪದ ಕಾರಣ ಹಲವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದರು. ಪಟ್ಟಣ ಹಾಗೂ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಸಾರ್ವಜನಿಕ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಕಿಡಿಕಾರಿದರು. ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ನಿಲ್ದಾಣದ ಸಾರ್ವಜನಿಕ ಶೌಚಾಲಯ, ಪಾರ್ಕಿಂಗ್ ಸ್ಥಳ, ನಿಲ್ದಾಣದ ಬಳಿಯಿರುವ ರಾಜಕಾಲುವೆ ಒತ್ತುವರಿ, ಪಕ್ಕದ ಮೀನಿನ ಮಾರುಕಟ್ಟೆ, ಅಕ್ಕಿಹೆಬ್ಬಾಳಿನ ಬಸ್ ಸ್ಟ್ಯಾಂಡ್, ವಸತಿ ನಿಲಯ, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ, ನಿರ್ದೇಶನ ನೀಡಿದರು.
ಸಾರಿಗೆ ಇಲಾಖೆಯ ಡಿಸಿ, ಪುರಸಭೆ ಅಧಿಕಾರಿ, ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಉಪ ಲೋಕಾಯುಕ್ತ ಬಿ. ವೀರಪ್ಪ ಸ್ವಯಂ ಪ್ರಕರಣ ದಾಖಲಿಸಿಕೊಂಡರು.

ಬಸ್ ನಿಲ್ದಾಣಕ್ಕೆ ಉಪ ಲೋಕಾಯುಕ್ತರು ಭೇಟಿ ನೀಡಿ ನಿಲ್ದಾಣದಲ್ಲಿ ಮಳೆ ನೀರು ನಿಂತಿರುವುದು, ಗಿಡಗಂಟಿ, ಹುಲ್ಲು ಬೆಳೆದಿರುವುದು. ಸ್ವಚ್ಛತೆ ಇಲ್ಲದಿರುವುದರ ವಿರುದ್ಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಲ್ದಾಣದ ಶೌಚಾಲಯದಲ್ಲಿ ನಿಗಧಿಯಂತೆ 2 ರೂ ಬದಲು 5ರೂ ಪಡೆಯುತ್ತಿರುವುದು ಕಂಡು ಬಂತು. ಶೌಚಾಲಯದ ಹಣ ಪಾವತಿಗೆ ಸ್ಕ್ಯಾನರ್ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.
ವಾಹನಗಳ ಪಾರ್ಕಿಂಗ್ ಪಾವತಿ ಹಣಕ್ಕೆ ಸ್ವಿಕೃತಿ ಕೊಡದಿರುವುದನ್ನು ಕಂಡು ಸ್ವೀಕೃತಿ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಮೈಸೂರಿಗೆ ಬಸ್‌ಗಳ ವ್ಯವಸ್ಥೆ ಇಲ್ಲದಿರುವ ಬಗ್ಗೆ ಪ್ರಯಾಣಿಕರು ದೂರಿದರು. ಬಸ್ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಬಸ್ ನಿಲ್ದಾಣ ಬಳಿಯ ರಾಜ ಕಾಲುವೆ ಒತ್ತುವರಿ ಬಗ್ಗೆ ಸಾರ್ವಜನಿಕರು ಉಪ ಲೋಕಾಯುಕ್ತರ ಗಮನ ಸೆಳೆದರು. ಸ್ಥಳಕ್ಕೆ ಭೇಟಿ ನೀಡಿ ಪುರಸಭೆ ಅಧಿಕಾರಿಗಳಿಗೆ ತೆರವು ಮಾಡುವಂತೆ ಎಚ್ಚರಿಕೆ ನೀಡಿದರು.
ನಿಲ್ದಾಣದ ಪಕ್ಕದಲ್ಲಿರುವ ಮೀನಿನ ಮಾರುಕಟ್ಟೆಯಲ್ಲಿ ಅಂಗಡಿ ಮಾಲೀಕರು ತ್ಯಾಜ್ಯವನ್ನು ಸಾರ್ವಜನಿಕ ಶೌಚಾಲಯಕ್ಕೆ ತುಂಬಿರುವುದು, ಅಂಗಡಿಯ ಪರವಾನಿಗೆ ಕೇಳಿದ್ದಕ್ಕೆ ಪರವಾನಿಗೆ ಪಡೆಯದಿರುವುದು ತಿಳಿದುಬಂತು. ಪುರಸಭೆಯ ಆರೋಗ್ಯ ನಿರೀಕ್ಷಕ ಅಶೋಕ್ ವಿರುದ್ಧ ಕಿಡಿಕಾರಿದರು. ಪಟ್ಟಣದಲ್ಲಿ ಪರವಾನಿಗೆ ಇಲ್ಲದಿರುವ ಅಂಗಡಿಗಳ ವಿವರ ನೀಡುವಂತೆ ಸೂಚಿಸಿದರು.

ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಆವರಣ ಸ್ವಚ್ಛತೆ ಇಲ್ಲದಿರುವುದು, ಮಹಿಳಾ ವಾರ್ಡಿನಲ್ಲಿ ಕರ್ಟನ್ ಅಳವಡಿಸದಿರುವುದು, ವಾರ್ಡ್‌ನಲ್ಲಿ ಫ್ಯಾನ್‌ಗಳು ಕೆಟ್ಟು ನಿಂತಿದ್ದರು ದುರಸ್ಥಿ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಮಾಣವಾಗಿ ಉದ್ಘಾಟನೆಯಾಗದಿರುವ ಅಕ್ಕಿಹೆಬ್ಬಾಳು ಬಸ್ ಸ್ಟ್ಯಾಂಡ್ ಒಂದು ತಿಂಗಳೊಳಗೆ ಉದ್ಘಾಟಿಸುವಂತೆ ತಿಳಿಸಿದರು. ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ರಜೆ ಕಾರಣ ಮಕ್ಕಳು ಇರಲಿಲ್ಲ. ಕಿಚನ್ ಒಳಗಡೆ ಇರಿಸಿದ್ದ ಗ್ಯಾಸ್‌ನ್ನು ಹೊರಗಡೆ ಇಡುವಂತೆ, ಹೊರಗಡೆ ಗ್ರೀನರಿ ಮಾಡುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ?ಮಂಡ್ಯ | ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
ಲೋಕಾಯುಕ್ತ ಇನ್ಸ್ ಪೆಕ್ಟರ್ ಬಿ. ಪಿ. ಬ್ಯಾಟರಾಯಗೌಡ, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್, ತಹಶೀಲ್ದಾರ್ ಡಾ. ಅಶೋಕ್, ಲೋಕೋಪಯೋಗಿ ಇಲಾಖೆ ಇಇ ಹರ್ಷ, ಎಇಇ ಮಂಜುನಾಥ್, ಪುರಸಭೆ ಮುಖ್ಯಾಧಿಕಾರಿ ನಟರಾಜ್, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಡಾ. ನರಸಿಂಹ ರಾಜು, ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಗೌಡ, ನವೀನ್, ರಾಜಶ್ವ ನೀರಿಕ್ಷಕ ಜ್ಞಾನೇಶ್ ಸೇರಿದಂತೆ ಹಲವರು ಇದ್ದರು.
ಸ್ವಯಂ ಪ್ರಕರಣವನ್ನು ದಾಖಲು ಮಾಡಿರವುದಕ್ಕೆ ಧನ್ಯವಾದಗಳು ಹಾಗೆ ಕರ್ತವ್ಯಲೋಪವೆಸಗಿರುವವರ ಮೇಲೆ ತೆಗೆದುಕೊಂಡ ಶಿಸ್ತುಕ್ರಮದ ಬಗ್ಗೆಯೂ ಹೀಗೆ ಮಾಹಿತಿ ನೀಡಿ ನಿದರ್ಶನವಾಗಲಿ.