ಪ್ರಜಾ ಧ್ವನಿ ಕರ್ನಾಟಕದ ವತಿಯಿಂದ 1949 ನವೆಂಬರ್ 26 ಸಂವಿಧಾನದ ಸಮರ್ಪಣಾ ದಿನ ನೆನಪಿನ ಪ್ರಯುಕ್ತ ನವಂಬರ್ 27 ಬುಧವಾರದಂದು ರಾಷ್ಟ್ರಧ್ವಜ ಗೌರವ ಯಾತ್ರೆಯು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಸಂಘಟಕರು ತಿಳಿಸಿದ್ದಾರೆ.
ನ.27ರಂದು ಬೆಳಗ್ಗೆ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮವು ಸಂಪಾಜೆ ಗೇಟಿನ ಬಳಿ ಬೆಳಿಗ್ಗೆ 8.30ಕ್ಕೆ ನಡೆಯಲಿದೆ. ಯಾತ್ರೆಯ ಉದ್ಘಾಟನೆಯನ್ನು ಸುಳ್ಯ ತಹಶೀಲ್ದಾರ್ ಮಂಜುಳಾ ಅವರು ನೆರವೇರಿಸಲಿದ್ದಾರೆ.
ಬಳಿಕ ರಾಷ್ಟ್ರ ಧ್ವಜವನ್ನು ಇರಿಸಿದ ಭವ್ಯ ವಾಹನ ಹಾಗೂ ಸಾರ್ವಜನಿಕರ ವಾಹನಗಳ ಮುಖಾಂತರ ಕಲ್ಲುಗುಂಡಿ, ಅರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಕಡೆಗಳಲ್ಲಿ ಸಂವಿಧಾನದ ಮಹತ್ವವನ್ನು ಸಾರುತ್ತಾ ಸಾಗಿ ಬಂದು ಸುಳ್ಯದ ಜ್ಯೋತಿ ಸರ್ಕಲ್‌ನಿಂದ ಪಾದಯಾತ್ರೆಯ ಮೂಲಕ ಸಾಗಿ ಬರಲಿದೆ. ಬಳಿಕ ಗಾಂಧಿ ನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಹಾರಾರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಳಿಕ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಭಾಷಣವನ್ನು ಖ್ಯಾತ ವಾಗ್ಮಿ, ಸಾಮಾಜಿಕ ಚಿಂತಕ ನಿಕೇತ್ ರಾಜ್ ಮೌರ್ಯ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮಹಾಪಾತ್ರ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡ ಇನಾಯತ್ ಅಲಿ, ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹರಿಪ್ರಸಾದ್ ತುದಿಯಡ್ಕ, ಧಾರ್ಮಿಕ ಮುಖಂಡರಾದ ಸಯ್ಯದ್ ತ್ವಾಹಿರ್ ಸಅದಿ ಬಾಅಲವಿ ತಂಙಳ್, ಸುಳ್ಯದ ಸೈಂಟ್ ಬ್ರಿಜಿಡ್ಸ್ ಚರ್ಚ್‌ನ ಧರ್ಮ ಗುರು ಫಾದರ್ ವಿಕ್ಟರ್ ಡಿಸೋಜಾ, ಸುಳ್ಯ ಪ್ರಜಾಧ್ವನಿ ಸಂಚಾಲಕರಾದ ಗೋಪಾಲ್ ಪೆರಾಜೆ ಉಪಸ್ಥಿತರಿರಲಿದ್ದಾರೆ.
ಪ್ರತಿಯೊಬ್ಬ ವಾಹನ ಚಾಲಕ ಮಾಲಕರು, ಯಾವುದೇ ವಾಹನ ದಟ್ಟಣೆಗೆ ಅವಕಾಶ ನೀಡದಂತೆ, ರಸ್ತೆಯಲ್ಲಿ ಓವರ್ ಟೇಕ್ ಅಥವಾ ವಾಹನ ನಿಲ್ಲಿಸಿದಲ್ಲಿ ಇತರ ವಾಹನಕ್ಕೆ ತೊಂದರೆ ಆಗದಂತೆ ಸಾಂವಿಧಾನಿಕ ಗೌರವ ಕಾಪಾಡುವಂತೆ ಸಂಘಟಕರಾದ ಪ್ರಜಾಧ್ವನಿ ಕರ್ನಾಟಕದ ಮುಖಂಡರು ವಿನಂತಿಸಿಕೊಂಡಿದ್ದಾರೆ.

