ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ ಅವರ ಲೇಖನ ಸಂಕಲನ ‘ಸಾಧನೆಯ ಶಿಖರಗಳು’ (ಸ್ಫೂರ್ತಿದಾಯಕ ವ್ಯಕ್ತಿ ಚಿತ್ರಗಳು) ಕೃತಿಯು ಭಾನುವಾರ ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆಗೊಂಡಿತು.

ಭಾರತೀ ಪ್ರಕಾಶನ, ಮೈಸೂರು ವತಿಯಿಂದ ಪ್ರಕಟಿತ ಈ ಕೃತಿಯನ್ನು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಎಸ್. ಹೊರಟ್ಟಿ ಅವರು ಬಿಡುಗಡೆ ಮಾಡಿ, “ವ್ಯಕ್ತಿಗಳ ಸಾಧನೆಗಳನ್ನು ದಾಖಲಿಸಿ ಸಮಾಜಕ್ಕೆ ಸ್ಫೂರ್ತಿ ನೀಡುವ ಇಂತಹ ಕೃತಿಗಳು ಯುವಜನತೆಗೆ ಮಾರ್ಗದರ್ಶಿಯಾಗುತ್ತವೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ಪತ್ರಕರ್ತರಾದ ಕೆ. ಶಿವಕುಮಾರ್ ಮಾತನಾಡಿ, “ಪತ್ರಿಕೋದ್ಯಮವು ಕೇವಲ ಸುದ್ದಿಗಳನ್ನು ದಾಖಲಿಸುವ ಮಾಧ್ಯಮವಲ್ಲ; ಸಮಾಜಕ್ಕೆ ಆದರ್ಶ ವ್ಯಕ್ತಿಗಳನ್ನು ಪರಿಚಯಿಸುವ ಜವಾಬ್ದಾರಿಯನ್ನೂ ಹೊಂದಿದೆ” ಎಂದು ಹೇಳಿದರು.
ಜನಮಿತ್ರ ಪತ್ರಿಕೆಯ ಪ್ರಧಾನ ಸಂಪಾದಕರಾದ ಮದನ ಗೌಡ ಮಾತನಾಡಿ, “ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡ ವ್ಯಕ್ತಿ-ವಿಶೇಷ ಅಂಕಣಗಳು ಓದುಗರಿಂದ ಉತ್ತಮ ಸ್ಪಂದನೆ ಪಡೆದಿದ್ದು, ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಶಾಶ್ವತ ದಾಖಲೆಯನ್ನಾಗಿ ಮಾಡಲಾಗಿದೆ” ಎಂದು ತಿಳಿಸಿದರು.
ಕೃತಿಯ ಕುರಿತು ಹಿರಿಯ ಪತ್ರಕರ್ತ ಹಾಗೂ ಲೇಖಕರಾದ ಎಸ್. ಪ್ರಕಾಶ್ಬಾಬು ಅವರು ವಿಶ್ಲೇಷಣಾತ್ಮಕವಾಗಿ ಮಾತನಾಡಿ, “ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಬದುಕು, ಹೋರಾಟ ಮತ್ತು ಯಶೋಗಾಥೆಗಳನ್ನು ಸರಳ ಹಾಗೂ ಪರಿಣಾಮಕಾರಿ ಭಾಷೆಯಲ್ಲಿ ಲೇಖಕರು ದಾಖಲಿಸಿರುವುದು ಕೃತಿಯ ವಿಶೇಷತೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಿ, “ಪತ್ರಕರ್ತರು ಸಮಾಜದ ಸ್ಪಂದನೆಗಳನ್ನು ದಾಖಲಿಸುವುದರ ಜೊತೆಗೆ ಸಾಧಕರ ಬದುಕಿನ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಕೊಡಗು | ಅತಿಥಿ ಶಿಕ್ಷಕರು, ಉಪನ್ಯಾಸಕರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಕೃತಿಕಾರ ಕೂಡ್ಲಿ ಗುರುರಾಜ ಉಪಸ್ಥಿತರಿದ್ದು, ಕೃತಿ ರಚನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಿರಿಯ ಪತ್ರಕರ್ತ ದಯಶಂಕರ ಮೈಲಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಾಹಿತ್ಯಾಸಕ್ತರು, ಪತ್ರಕರ್ತರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




