ʼಲಗಾನ್‌ʼಗೆ 25ರ ಸಂಭ್ರಮ: ಸಾರ್ವಕಾಲಿಕ ಶ್ರೇಷ್ಠ ʼಕ್ರಿಕೆಟ್ ಮಹಾಕಾವ್ಯʼದ ಬಿಹೈಂಡ್‌ ದ ಸೀನ್ಸ್ ಕಥೆಗಳಿವು…!

Date:

ಅಂದಿಗೆ ಬಾಲಿವುಡ್‌, “ಪೀರಿಯಾಡಿಕಲ್ ಸಿನಿಮಾಗಳು ಓಡುವುದಿಲ್ಲ, ಕ್ರೀಡಾ ಆಧಾರಿತ ಸಿನಿಮಾಗಳು ಫ್ಲಾಪ್ ಆಗುತ್ತವೆ ಮತ್ತು ಹಳ್ಳಿಗಾಡಿನ ಕಥೆಗಳಿಗೆ ಮಾರ್ಕೆಟ್ ಇಲ್ಲ ಎನ್ನುವ ಲಾಜಿಕ್‌ ಇಲ್ಲದ 3 ನಿಯಮಗಳನ್ನ ಪಾಲಿಸುತ್ತಿತ್ತು. ಇದೇ ಕಾರಣಕ್ಕೆ ಇಡೀ ಚಿತ್ರರಂಗದ ಯಾವೊಬ್ಬ ನಿರ್ಮಾಪಕನೂ ಈ ಚಿತ್ರಕ್ಕೆ ಹಣ ಹಾಕಲು ಮುಂದೆ ಬರಲಿಲ್ಲ. ಕೊನೆಗೆ, ಆಮಿರ್ ಖಾನ್ ತಾವೇ ಸ್ವತಃ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಎಂಬ ಸಂಸ್ಥೆ ಕಟ್ಟಿ, ಅಂದಿನ ಕಾಲಕ್ಕೆ ಭಾರತದ ಅತ್ಯಂತ ದುಬಾರಿ ಬಜೆಟ್ ₹25 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಮುಂದೆ ಬಂದರು.

- Advertisement -

ಭಾರತೀಯ ಚಿತ್ರರಂಗದ ಇತಿಹಾಸವನ್ನು ‘ಲಗಾನ್‌ಗಿಂತ ಮುಂಚೆ’ ಮತ್ತು ‘ಲಗಾನ್‌ ನಂತರ’ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು ಎಂದು ಭಾರತೀಯ ಸಿನೆಮಾ ವಿಶ್ಲೇಷಕರು ನುಡಿಯುತ್ತಾರೆಂದರೆ, ಈ ಚಿತ್ರ ಎಬ್ಬಿಸಿದ ಬಿರುಗಾಳಿಯ ಪವರ್‌ ಎಷ್ಟಿತ್ತು ಎಂಬುದು ತಿಳಿಯುತ್ತದೆ. ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಮಹಾಕಾವ್ಯ ʼಲಗಾನ್‌ʼ‌, ಭರ್ತಿ 25 ವರ್ಷಗಳನ್ನು ಪೂರೈಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

2001ರ ಜೂ.15 ರಂದು ಬಾಲಿವುಡ್‌ನ ಪ್ರತಿಯೊಂದು ಸಾಂಪ್ರದಾಯಿಕ ಬೇಲಿಗಳನ್ನು ಮುರಿದು, ಜಾಗತಿಕ ಮಟ್ಟದಲ್ಲಿ ಆಸ್ಕರ್ ಅಂಗಳದವರೆಗೂ ಹೆಜ್ಜೆ ಹಾಕಿದ ಈ ಚಿತ್ರದ ಹಿಂದೆ ಬಹುಮಂದಿಗೆ ತಿಳಿಯದ ಇತಿಹಾಸ, ಶ್ರಮ, ಸ್ವಾಭಿಮಾನ, ಧೈರ್ಯ ಮತ್ತು ಮನುಷ್ಯತ್ವದ ರೋಚಕ ಕಥೆಗಳಿವೆ.

ಇತ್ತೀಚೆಗೆ ಚಿತ್ರದ ನಾಯಕ ನಟ ಸೂಪರ್‌ಸ್ಟಾರ್ ಆಮಿರ್ ಖಾನ್, ನಿರ್ದೇಶಕ ಅಶುತೋಷ್ ಗೋವಾರಿಕರ್, ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಮತ್ತು ಸಾಹಿತ್ಯ ದಂತಕಥೆ ಜಾವೇದ್ ಅಖ್ತರ್ ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಸೇರಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇಂದು ಜಗತ್ತೇ ಕೊಂಡಾಡುವ ಈ ಮಹಾಕಾವ್ಯ ಅಂದು ಆರಂಭದಲ್ಲಿ ಬಹುತೇಕರಿಂದ ‘ಇದೊಂದು ಫ್ಲಾಪ್ ಐಡಿಯಾ’ ಎಂದು ತಿರಸ್ಕರಿಸಲ್ಪಟ್ಟಿತ್ತು ಎಂದರೆ ನಂಬಲೇಬೇಕು!

ನಿರ್ದೇಶಕ ಅಶುತೋಷ್ ಗೋವಾರಿಕರ್ ಧೈರ್ಯವನ್ನ ಮೆಚ್ಚಲೇಬೇಕು. ‘ಲಗಾನ್’ ಕಥೆ ಸಿದ್ಧಪಡಿಸುವಾಗ ಅವರು ತೀವ್ರ ಸಂಕಷ್ಟದಲ್ಲಿದ್ದರು. ಅವರು ನಿರ್ದೇಶಿಸಿದ್ದ ಹಿಂದಿನ ಎರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡದೆ ಸೈಲೆಂಟ್‌ ಆಗೇ ಮರೆಗೆ ಸರಿದಿದ್ದವು. ಇಂತಹ ಸಮಯದಲ್ಲಿ ಅವರು ʼಬ್ರಿಟಿಷರ ಕಾಲದ ಹಳ್ಳಿಗರು ತಮಗೆ ವಿಧಿಸಿದ ಧಾನ್ಯದ ತೆರಿಗೆಯನ್ನು (ಲಗಾನ್) ಮನ್ನಾ ಮಾಡಿಸಿಕೊಳ್ಳಲು ಇಂಗ್ಲಿಷರ ವಿರುದ್ಧ ಕ್ರಿಕೆಟ್ ಪಂದ್ಯ ಆಡುತ್ತಾರೆʼ ಎನ್ನುವ ವಿಚಿತ್ರ ಕಥೆಯನ್ನು ಸಿದ್ಧಪಡಿಸಿದ್ದರು.

WhatsApp Image 2026 06 01 at 4.27.54 PM 1

ಅಶುತೋಷ್ ಈ ಕಥೆಯನ್ನು ತೆಗೆದುಕೊಂಡು ಮೊದಲು ಹೋದದ್ದು ಆಮಿರ್ ಖಾನ್ ಬಳಿ. ಕಥೆಯ ಒನ್‌ಲೈನ್ ಕೇಳಿದ ಕೂಡಲೇ ಆಮಿರ್ ಖಾನ್ ಮುಖದ ಮೇಲೆಯೇ, “ಬಹುತ್ ಬುರಿ ಕಹಾನಿ ಹೈ ಯಾರ್ (ಇದು ಅತ್ಯಂತ ಕೆಟ್ಟ ಕಥೆ ಗೆಳೆಯ). ಧೋತಿ ಉಟ್ಟುಕೊಂಡ ಹಳ್ಳಿಗರು ಕ್ರಿಕೆಟ್ ಆಡಿ ಬ್ರಿಟಿಷರನ್ನು ಗೆಲ್ಲುವುದು ಯಾವ ತರ್ಕಕ್ಕೆ ನಿಲುಕುತ್ತದೆ?” ಎಂದು ತಿರಸ್ಕರಿಸಿದ್ದರು.

ಆದರೆ ಅಶುತೋಷ್ ಧೃತಿಗೆಡಲಿಲ್ಲ. ಇನ್ನೊಮ್ಮೆ ಪ್ರಯತ್ನಿಸಿದರು. ಕೊನೆಗೆ 3 ತಿಂಗಳ ನಂತರ, ಸೌಜನ್ಯಕ್ಕಾಗಿ ಪೂರ್ತಿ ಚಿತ್ರಕಥೆಯನ್ನು ಕೇಳಲು ಆಮಿರ್ ಒಪ್ಪಿದರು. ಅಶುತೋಷ್ ಇಡೀ ಸ್ಕ್ರಿಪ್ಟ್ ಅನ್ನು ದೃಶ್ಯಾವಳಿಗಳ ಸಮೇತ ವಿವರಿಸಿದಾಗ ಆಮಿರ್ ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದರು. ಕಥೆಯಲ್ಲಿದ್ದ ರೋಮಾಂಚನ, ಭಾವನಾತ್ಮಕ ತೀವ್ರತೆ ಮತ್ತು ಒಗ್ಗಟ್ಟಿನ ಸಂದೇಶ ಆಮಿರ್ ಅವರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಅಂದಿಗೆ ಬಾಲಿವುಡ್‌ ಪೀರಿಯಾಡಿಕಲ್ ಸಿನಿಮಾಗಳು ಓಡುವುದಿಲ್ಲ, ಕ್ರೀಡಾ ಆಧಾರಿತ ಸಿನಿಮಾಗಳು ಫ್ಲಾಪ್ ಆಗುತ್ತವೆ ಮತ್ತು ಹಳ್ಳಿಗಾಡಿನ ಕಥೆಗಳಿಗೆ ಮಾರುಕಟ್ಟೆ ಇಲ್ಲ ಎನ್ನುವ ಲಾಜಿಕ್‌ ಇಲ್ಲದ 3 ನಿಯಮಗಳನ್ನ ಪಾಲಿಸುತ್ತಿತ್ತು. ಇದೇ ಕಾರಣಕ್ಕೆ ಇಡೀ ಚಿತ್ರರಂಗದ ಯಾವೊಬ್ಬ ನಿರ್ಮಾಪಕನೂ ಈ ಚಿತ್ರಕ್ಕೆ ಹಣ ಹಾಕಲು ಮುಂದೆ ಬರಲಿಲ್ಲ. ಕೊನೆಗೆ, ಸಿನಿಮಾ ದಿವಾಳಿಯಾದರೆ ತನ್ನ ಇಡೀ ಕರಿಯರ್ ಕೊನೆಗೊಳ್ಳುತ್ತದೆ ಎಂದು ಗೊತ್ತಿದ್ದರೂ, ಆಮಿರ್ ಖಾನ್ ತಾವೇ ಸ್ವತಃ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಎಂಬ ಸಂಸ್ಥೆ ಕಟ್ಟಿ, ಅಂದಿನ ಕಾಲಕ್ಕೆ ಭಾರತದ ಅತ್ಯಂತ ದುಬಾರಿ ಬಜೆಟ್ ₹25 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಮುಂದೆ ಬಂದರು.

ಸುಳ್ಳಾದ ಜಾವೇದ್‌ ಅಖ್ತರ್‌ ಭವಿಷ್ಯ

ಚಿತ್ರದ ಹಾಡುಗಳನ್ನು ಬರೆದ ಶ್ರೇಷ್ಠ ಸಾಹಿತಿ ಜಾವೇದ್ ಅಖ್ತರ್ ಮೊನ್ನೆ 25ನೇ ವರ್ಷದ ಗೆಟ್‌ ಟುಗೆದರ್‌ನಲ್ಲಿ ಭಾಗವಹಿಸಿದ್ದ ವೇಳೆ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಆಮಿರ್ ಖಾನ್ ಬಾಲ್ಯದಿಂದಲೂ ಜಾವೇದ್ ಅವರಿಗೆ ಪರಿಚಿತರಾಗಿದ್ದರಿಂದ, ಆಮಿರ್ ಈ ಸಿನಿಮಾ ಮಾಡಿ ಬೀದಿಗೆ ಬೀಳುವುದು ಅವರಿಗೆ ಇಷ್ಟವಿರಲಿಲ್ಲ. “ನಾನು ಆಮಿರ್‌ನನ್ನು ತಡೆಯದಿದ್ದರೆ ಇನ್ಯಾರು ತಡೆಯುತ್ತಾರೆ? ಈ ಸಿನಿಮಾ ಕಮರ್ಷಿಯಲ್ ಸುಸೈಡ್ ಎಂದು ಭಾವಿಸಿದ್ದೆ” ಎಂದಿದ್ದಾರೆ ಜಾವೇದ್. ಆದರೆ ಸಿನಿಮಾ ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದಾಗ, ತಾನು ಮಾಡಿದ ಅತಿ ದೊಡ್ಡ ತಪ್ಪು ನಿರ್ಧಾರ” ಅದಾಗಿತ್ತು ಎಂದು ಜಾವೇದ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಚಿತ್ರದ ಅತ್ಯಂತ ಜನಪ್ರಿಯ ಗೀತೆಯಾದ ʼಮಿತ್ವಾʼ ಹಾಡಿನಲ್ಲಿ ಮೊದಲು ‘ಮಿತ್ವಾ’ ಎಂಬ ಪದವೇ ಇರಲಿಲ್ಲ! ಕೊನೆಯ ಕ್ಷಣದ ಧಾಟಿಯಲ್ಲಿ ಜಾವೇದ್ ಈ ಪದವನ್ನು ಸೇರಿಸಿದ್ದರಂತೆ. ಚಿತ್ರದಲ್ಲಿ ಬರುವ “ಓ ರೇ ಚೋರಿ” ಹಾಡಿನ ಮಧ್ಯೆ ಬರುವ ಇಂಗ್ಲಿಷ್ ಲಿರಿಕ್ಸ್ ಅನ್ನು ಬರೆದದ್ದು ಅಂದು ಇನ್ನೂ ಚಿಕ್ಕ ಮಕ್ಕಳಾಗಿದ್ದ ಜಾವೇದ್ ಅಖ್ತರ್ ಅವರ ಇಬ್ಬರು ಮಕ್ಕಳು, ಇಂದಿನ ಖ್ಯಾತ ನಿರ್ದೇಶಕರಾದ ಜೋಯಾ ಅಖ್ತರ್ ಮತ್ತು ಫರ್ಹಾನ್ ಅಖ್ತರ್!

ಇತ್ತ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರಿಗೆ ನಿರ್ದೇಶಕ ಅಶುತೋಷ್, ʼಭಾರತೀಯ ಮಣ್ಣಿನ ವಾಸನೆ ಇರುವ, ಅದೇ ಸಮಯದಲ್ಲಿ ಜಾಗತಿಕ ಮಟ್ಟದ ಆರ್ಕೆಸ್ಟ್ರಾ ಹೊಂದಿರುವ ಸಂಗೀತ ನೀಡಬೇಕುʼ ಎನ್ನುವ ಟಾಸ್ಕ್‌ ಒಂದನ್ನು ನೀಡುತ್ತಾರೆ. ಚಿತ್ರದ ಮೊದಲ ಹಾಡು “ಘನನ್ ಘನನ್” ಕೇಳೇ ಇರುತ್ತೀರಿ. ಅದು ಮರುಭೂಮಿಯಲ್ಲಿ ಮಳೆಗಾಗಿ ಕಾಯುವ ಹಳ್ಳಿಗರ ಹಂಬಲವನ್ನು ತೋರಿಸುತ್ತದೆ. ಆಕಾಶದಲ್ಲಿ ಕಪ್ಪನೆ ಮೋಡಗಳು ಕವಿದಾಗ ಉಂಟಾಗುವ ಗಾಂಭೀರ್ಯ ಮತ್ತು ಶಬ್ದವನ್ನು ತರಲು, ರೆಹಮಾನ್, ಗಾಯಕ ಶಂಕರ್ ಮಹದೇವನ್ ಅವರ ಧ್ವನಿಯನ್ನು ಮೈಕ್ರೋಫೋನ್‌ನಲ್ಲಿ ಹಲವು ಲೇಯರ್‌ಗಳಾಗಿ ರೆಕಾರ್ಡ್ ಮಾಡಿ ಡಿಜಿಟಲ್ ಆಗಿ ಮರುಸೃಷ್ಟಿಸುತ್ತಾರೆ. ಇದು ಮರುಭೂಮಿಯಲ್ಲಿ ಅಕೌಸ್ಟಿಕ್ ಗುಡುಗು ಮೂಡಿದಂತಹ ಅನುಭವ ನೀಡಿತ್ತು.

ಹಾಡಿನ ಫೈನಲ್ ಮಿಕ್ಸ್ ಕೇಳಿದ ಆಮಿರ್ ಖಾನ್ ಸ್ಟುಡಿಯೋದಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಕಣ್ಣೀರು ಹಾಕುತ್ತಾ ಕುಳಿತಿದ್ದರಂತೆ. ನಂತರ ರೆಹಮಾನ್ ಹೆಗಲ ಮೇಲೆ ಕೈಹಾಕಿ, “ನನ್ನ ಸಿನಿಮಾ ಇಷ್ಟೊಂದು ದೈವಿಕವಾಗಿ ಮೂಡಿಬರಲು ಹೇಗೆ ಸಾಧ್ಯ?” ಎಂದು ಭಾವುಕರಾಗಿದ್ದರಂತೆ.

ಮರುಭೂಮಿಯ ಸವಾಲುಗಳು

‘ಲಗಾನ್’ ಸಿನಿಮಾದ ಬಹುದೊಡ್ಡ ತಾಂತ್ರಿಕ ಸವಾಲು ಎಂದರೆ ಅದರ ಶೂಟಿಂಗ್ ಲೊಕೇಶನ್. ಇಡೀ ಸಿನಿಮಾವನ್ನು ಗುಜರಾತ್‌ನ ಕಚ್ ಮರುಭೂಮಿಯ ಭುಜ್ ಎಂಬ ನಿರ್ಜನ ಪ್ರದೇಶದಲ್ಲಿ ಸತತ 5 ತಿಂಗಳ ಕಾಲ ಒಂದೇ ಶೆಡ್ಯೂಲ್‌ನಲ್ಲಿ ಚಿತ್ರೀಕರಿಸಲಾಗಿದೆ.

ಲಂಡನ್‌ನಿಂದ ಬಂದಿದ್ದ ಬ್ರಿಟಿಷ್ ನಟಿ ರೇಚಲ್ ಶೆಲ್ಲಿ (ಎಲಿಜಬೆತ್) ಮತ್ತು ವಿಲನ್ ಪಾತ್ರಧಾರಿ ಪಾಲ್ ಬ್ಲ್ಯಾಕ್‌ಥಾರ್ನ್‌ಗೆ ಅಲ್ಲಿನ 45°C ಧಗಧಗಿಸುವ ಬಿಸಿಲು ನರಕ ಸದೃಶವಾಗಿತ್ತು. ಅದರಲ್ಲೂ ಬ್ರಿಟಿಷ್ ಕಾಲದ ಭಾರೀ ಉಣ್ಣೆಯ ಕೋಟುಗಳು, ಬಿಗಿಯಾದ ವೆಲ್ವೆಟ್ ಗೌನ್‌ಗಳು ಮತ್ತು ಮಂದವಾದ ಬೂಟುಗಳನ್ನು ಧರಿಸಿ ನಟಿಸುವುದು ದೈಹಿಕವಾಗಿ ಹಿಂಸೆಯಾಗಿತ್ತು. ಬ್ರಿಟಿಷ್ ಕಲಾವಿದರು ಪ್ರತಿ ಶಾಟ್ ಮುಗಿದ ತಕ್ಷಣ ಪ್ರಜ್ಞೆ ತಪ್ಪಿ ಬೀಳುತ್ತಿದ್ದರು. ಅವರನ್ನು ಬದುಕಿಸಲು ಸೆಟ್‌ನಲ್ಲಿ ದೇಸೀ ಶೈಲಿಯ ದೈತ್ಯ ಏರ್ ಕೂಲರ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ, ವಿಲನ್ ಕ್ಯಾಪ್ಟನ್ ರಸೆಲ್ ಪಾತ್ರ ಮಾಡಿದ್ದ ಪಾಲ್, ದಿನಕ್ಕೆ 5 ಗಂಟೆಗಳ ಕಾಲ ಕಷ್ಟಪಟ್ಟು ಹಿಂದಿ ಕಲಿತು ತಾವೇ ಸ್ವತಃ ಡಬ್ಬಿಂಗ್ ಮಾಡಿದ್ದು ಚಿತ್ರದ ಇನ್ನೊಂದು ಹೆಗ್ಗಳಿಕೆ.

WhatsApp Image 2026 06 01 at 4.39.54 PM

ನಿರ್ಮಾಪಕನಾಗಿ ಆಮಿರ್ ತಂದಿದ್ದ ಕಠಿಣ ರೂಲ್ಸ್‌ಗಳು..

ಮರುಭೂಮಿಯ ಸವಾಲುಗಳ ನಡುವೆ ನಟ, ನಿರ್ಮಾಪಕ ಆಮಿರ್‌ಖಾನ್‌ ಸೆಟ್‌ನಲ್ಲಿ ಕೆಲ ಕಠಿಣ ರೂಲ್ಸ್‌ಗಳನ್ನ ಜಾರಿಗೆ ತಂದಿದ್ದರು. ಸೆಟ್‌ನಲ್ಲಿ ಯಾರೂ ಸ್ಟಾರ್ ಇರಲಿಲ್ಲ. ಭುಜ್‌ನಲ್ಲಿ ಹೊಸದಾಗಿ ಕಟ್ಟಲಾಗಿದ್ದ ಒಂದು ಅಪಾರ್ಟ್‌ಮೆಂಟ್‌ ಅನ್ನು ಆಮಿರ್ ಲೀಸ್‌ಗೆ ಪಡೆದು ಹೋಟೆಲ್ ಆಗಿ ಪರಿವರ್ತಿಸಿದ್ದರು. ಅಲ್ಲಿ ಆಮಿರ್ ಖಾನ್, ಬ್ರಿಟಿಷ್ ನಟರು, ತಾಂತ್ರಿಕ ವರ್ಗ ಮತ್ತು ಲೈಟ್ ಬಾಯ್ಸ್ ಎಲ್ಲರೂ ಒಂದೇ ರೀತಿಯ ಕೋಣೆಗಳಲ್ಲಿ ಉಳಿದುಕೊಳ್ಳಬೇಕಿತ್ತು ಮತ್ತು ಒಂದೇ ರೀತಿಯ ಊಟ ಮಾಡಬೇಕಿತ್ತು. ಪ್ರತಿ ದಿನ ಮುಂಜಾನೆ ಸರಿಯಾಗಿ 5 ಗಂಟೆಗೆ ಸೆಟ್‌ಗೆ ಹೋಗುವ ಬಸ್ಸುಗಳು ಹೋಟೆಲ್‌ನಿಂದ ಹೊರಡುತ್ತಿದ್ದವು. ಆಮಿರ್ ಖಾನ್ ಸೇರಿದಂತೆ ಯಾರೇ ತಡವಾಗಿ ಬಂದರೂ ಬಸ್ ನಿಲ್ಲುತ್ತಿರಲಿಲ್ಲ. ಒಂದು ದಿನ ಮುಖ್ಯ ನಟಿಯೊಬ್ಬರು 5 ನಿಮಿಷ ತಡವಾಗಿ ಬಂದಾಗ ಬಸ್ ಹೊರಟುಹೋಗಿತ್ತು, ಕೊನೆಗೆ ಅವರು ಸ್ವಂತ ಖರ್ಚಿನಲ್ಲಿ ಸೆಟ್‌ಗೆ ತಲುಪಬೇಕಾಗಿತ್ತು.

ಅಂದಿನ ಕಾಲದಲ್ಲಿ ಸಿನಿಮಾಗಳಿಗೆ ಶೂಟಿಂಗ್ ಮುಗಿದ ನಂತರ ಸ್ಟುಡಿಯೋದಲ್ಲಿ ಧ್ವನಿ ಮುದ್ರಣ (Dubbing) ಮಾಡಲಾಗುತ್ತಿತ್ತು. ಆದರೆ ಲಗಾನ್ ಸಿನಿಮಾದಲ್ಲಿ ನಟರು ಸ್ಥಳದಲ್ಲೇ ಆಡುವ ಮಾತುಗಳನ್ನು ರೆಕಾರ್ಡ್ ಮಾಡುವ ‘ಸಿಂಕ್ ಸೌಂಡ್’ ತಂತ್ರಜ್ಞಾನ ಬಳಸಲಾಗಿತ್ತು. ಮರುಭೂಮಿಯ ಗಾಳಿಯ ನಡುವೆ ಶಬ್ದ ಗ್ರಹಿಸುವುದು ದೊಡ್ಡ ಸವಾಲಾಗಿತ್ತು. ಒಂದು ಮೈಲಿ ದೂರದಲ್ಲಿ ಯಾವುದೇ ಟ್ರ್ಯಾಕ್ಟರ್ ಹೋದರೂ, ಅಥವಾ ಆಕಾಶದಲ್ಲಿ ಒಂದು ವಿಮಾನ ಹಾರಿದರೂ ಸಾವಿರಾರು ಜನರಿದ್ದ ಇಡೀ ಬೃಹತ್ ದೃಶ್ಯದ ಟೇಕ್ ಅನ್ನು ರದ್ದುಗೊಳಿಸಿ ಮತ್ತೆ ಮೊದಲಿನಿಂದ ಶೂಟ್ ಮಾಡಬೇಕಾಗುತ್ತಿತ್ತು.

ಒಂದೇ ಫ್ರೇಮಿನಲ್ಲಿ ಬರೋಬ್ಬರಿ 10,000 ಹಳ್ಳಿಗರು

ಚಿತ್ರದ ಕೊನೆಯ ಅರ್ಧಭಾಗ ಪೂರ್ತಿ ಕ್ರಿಕೆಟ್ ಪಂದ್ಯದ ಸುತ್ತಲೇ ಸಾಗುತ್ತದೆ. ಅಂದು ಇಂದಿನಂತೆ ಕಂಪ್ಯೂಟರ್ ಗ್ರಾಫಿಕ್ಸ್ (CGI) ಮೂಲಕ ಕೃತಕವಾಗಿ ಪ್ರೇಕ್ಷಕರನ್ನು ಸೃಷ್ಟಿಸುವ ತಂತ್ರಜ್ಞಾನ ಭಾರತದಲ್ಲಿ ಇನ್ನೂ ಬೆಳೆದಿರಲಿಲ್ಲ. ಕ್ಲೈಮ್ಯಾಕ್ಸ್ ಪಂದ್ಯಕ್ಕೆ ಕ್ರೀಡಾಂಗಣದಲ್ಲಿ ಸಾವಿರಾರು ಪ್ರೇಕ್ಷಕರು ಬೇಕಾಗಿದ್ದರು.

ಅಶುತೋಷ್ ಮತ್ತು ಆಮಿರ್ ಕಚ್‌ನ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ 10,000ಕ್ಕೂ ಹೆಚ್ಚು ಗ್ರಾಮೀಣ ಜನರನ್ನು ಚಿತ್ರೀಕರಣಕ್ಕೆ ಕರೆತಂದರು. ಇಷ್ಟೊಂದು ದೊಡ್ಡ ಜನಸಮೂಹವನ್ನು ಮೊಬೈಲ್ ಫೋನ್‌ಗಳಿಲ್ಲದ ಆ ಕಾಲದಲ್ಲಿ, ಧಗಧಗಿಸುವ ಬಿಸಿಲಿನಲ್ಲಿ ನಿಯಂತ್ರಿಸುವುದು ಅಸಾಧ್ಯದ ಕೆಲಸವಾಗಿತ್ತು. ಮಧ್ಯಾಹ್ನದ ಬಿಸಿಲಿಗೆ ಸುಸ್ತಾಗಿ ಹಳ್ಳಿಗರು ಮನೆಗೆ ಮರಳಲು ಯತ್ನಿಸುತ್ತಿದ್ದಾಗ, ಆಮಿರ್ ಖಾನ್ ಕೈಯಲ್ಲಿ ಮೈಕ್ ಹಿಡಿದು ಕ್ರೀಡಾಂಗಣದ ಪಿಚ್ ಮೇಲೆ ನಿಂತು ಹಳೆಯ ಹಿಂದಿ ಹಾಡುಗಳನ್ನು ಹಾಡುತ್ತಾ ಜನರನ್ನು ರಂಜಿಸುತ್ತಿದ್ದರು.

ಈ ಶೂಟಿಂಗ್ ಪ್ರಕ್ರಿಯೆಯಲ್ಲಿ ಅದ್ಭುತವಾದ ಸಾಂಸ್ಕೃತಿಕ ಸೌಹಾರ್ದತೆಯೊಂದು ಅದೃಶ್ಯವಾಗಿ ಮೂಡಿತ್ತು. ಬ್ರಿಟಿಷ್ ನಟರು ಮತ್ತು ಭಾರತೀಯ ಹಳ್ಳಿಗರ ನಡುವೆ ಭಾಷೆಯ ಸಂಪರ್ಕವಿಲ್ಲದಿದ್ದರೂ, ರೆಹಮಾನ್ ಅವರ ಸಂಗೀತದ ಲಯ ಎಲ್ಲರನ್ನೂ ಒಂದು ಮಾಡಿತ್ತು. ಬ್ರಿಟಿಷ್ ನಟಿಯರು ಹಳ್ಳಿಯ ಹೆಣ್ಣುಮಕ್ಕಳಿಗೆ ಇಂಗ್ಲೆಂಡ್‌ನ ಸಾಂಪ್ರದಾಯಿಕ ಕೈ ಆಟಗಳನ್ನು ಕಲಿಸಿಕೊಟ್ಟರೆ, ಹಳ್ಳಿಯ ಹಿರಿಯರು ಬ್ರಿಟಿಷ್ ಪುರುಷರಿಗೆ ಮರುಭೂಮಿಯ ಬಿಸಿಲಿನಿಂದ ರಕ್ಷಣೆ ಪಡೆಯಲು ಸಾಂಪ್ರದಾಯಿಕ ಶೈಲಿಯಲ್ಲಿ ಪೇಟ (ಟರ್ಬನ್) ಕಟ್ಟುವುದು ಹೇಗೆ ಎಂದು ಕಲಿಸಿಕೊಡುತ್ತಿದ್ದರು. ಅಲ್ಲಿ ಬ್ರಿಟಿಷರು-ಭಾರತೀಯರು ಎಂಬ ಭೇದವೇ ಇರಲಿಲ್ಲ, ಕೇವಲ ಕಲಾಪ್ರೇಮಿಗಳಷ್ಟೇ ಇದ್ದರು.

ಇತಿಹಾಸ ಸೃಷ್ಟಿಸಿದ ʼನಾನಿ ಅರಲ್ʼ ದುರಂತ

‘ಲಗಾನ್’ ಸಿನಿಮಾದ ಕಥೆ ಪರದೆ ಮೇಲೆ ಮುಗಿಯುವಂತದ್ದಾಗಿರಲಿಲ್ಲ. ಅದು ನಿಜ ಜೀವನದಲ್ಲೂ ಮರುಕಳಿಸಿತು. ಸಿನಿಮಾ ಶೂಟಿಂಗ್ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದಾಗ, ಅಂದರೆ 2001ರ ಜನವರಿ 26ರಂದು ಗುಜರಾತ್‌ನ ಭುಜ್‌ನಲ್ಲಿ ಭೀಕರ ಭೂಕಂಪ ಸಂಭವಿಸಿತು. ಇಡೀ ಭುಜ್ ನಗರ ಅಕ್ಷರಶಃ ಸ್ಮಶಾನವಾಗಿತ್ತು. ತಮಗೆ ಆಶ್ರಯ ನೀಡಿ, ಸಿನಿಮಾದಲ್ಲಿ ಎಕ್ಸ್‌ಟ್ರಾಗಳಾಗಿ ನಟಿಸಿದ್ದ ಸಾವಿರಾರು ಹಳ್ಳಿಗರು ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದರು.

ಇದನ್ನೂ ಓದಿ: ದಾಖಲೆ ಮಟ್ಟದ ಜನಸಂಖ್ಯಾ ಕುಸಿತ; ದೇಶ ಉಳಿಸಲು ವಿದೇಶೀ ಕಾರ್ಮಿಕರ ಮೊರೆ ಹೋದ ಜಪಾನ್!

ಸುದ್ದಿ ತಿಳಿಯುತ್ತಿದ್ದಂತೆ ಲಂಡನ್‌ನಲ್ಲಿದ್ದ ಬ್ರಿಟಿಷ್ ನಟರು ಕಣ್ಣೀರು ಹಾಕಿ ಧನಸಹಾಯ ಕಳುಹಿಸಿಕೊಟ್ಟರು. ಇತ್ತ ಮುಂಬೈನಲ್ಲಿದ್ದ ಆಮಿರ್ ಖಾನ್ ಮತ್ತು ಅಶುತೋಷ್ ಗೋವಾರಿಕರ್ ತಮ್ಮ ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಭುಜ್‌ಗೆ ಧಾವಿಸಿದರು. ಅವರು ಚೆಕ್ ನೀಡಿ ಕೈತೊಳೆದುಕೊಳ್ಳಲಿಲ್ಲ. ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಿದ್ದ ‘ನಾನಿ ಅರಲ್’ ಎಂಬ ಇಡೀ ಹಳ್ಳಿಯನ್ನೇ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ದತ್ತು ಪಡೆದಿತ್ತು. ಅಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ಭೂಕಂಪ ನಿರೋಧಕ ಆಧುನಿಕ ಮನೆಗಳು, ಸುಸಜ್ಜಿತ ಶಾಲೆಗಳು, ಸಮುದಾಯ ಭವನಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ತಾವೇ ಖುದ್ದಾಗಿ ನಿಂತು ನಿರ್ಮಿಸಿಕೊಟ್ಟರು. ಸಿನಿಮಾ ಎಂದರೆ ಕೇವಲ ವ್ಯಾಪಾರವಲ್ಲ, ಅದೊಂದು ಭಾವನಾತ್ಮಕ ಸಂಬಂಧ ಎಂಬುದನ್ನು ಲಗಾನ್ ತಂಡ ಸಾಬೀತುಪಡಿಸಿತ್ತು.

ಮತ್ತೊಮ್ಮೆ ಒಂದಾಗಲಿದೆ ʼಮ್ಯಾಜಿಕಲ್‌ ಜೋಡಿʼ

ಪಿಂಕ್‌ವಿಲ್ಲಾ ವರದಿಯ ಪ್ರಕಾರ, ಈ ಜೋಡಿ ಭಾರತೀಯ ಕ್ರಿಕೆಟ್ ಇತಿಹಾಸದ ದಂತಕಥೆ ‘ಲಾಲಾ ಅಮರನಾಥ್’ ಅವರ ಬಯೋಪಿಕ್ ಚಿತ್ರಕ್ಕಾಗಿ ಮತ್ತೆ ಕೈಜೋಡಿಸಿದೆ. 1947ರ ಭಾರತ-ಪಾಕಿಸ್ತಾನ ವಿಭಜನೆಯ ತಲ್ಲಣಗಳು ಮತ್ತು ದೇಶಭಕ್ತಿಯ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಪೀರಿಯಡ್ ಸ್ಪೋರ್ಟ್ಸ್ ಡ್ರಾಮಾದ ಸ್ಕ್ರಿಪ್ಟ್ ರೀಡಿಂಗ್ ಈಗಾಗಲೇ ಮುಕ್ತಾಯಗೊಂಡಿದೆ. ಈ ವರ್ಷದ ಅಂತ್ಯದೊಳಗೆ ಚಿತ್ರದ ಶೂಟಿಂಗ್ ಅಧಿಕೃತವಾಗಿ ಆರಂಭವಾಗಲಿದೆ.

ಕಾಲದ ಕನ್ನಡಿಯಲ್ಲೂ ಮಸುಕಾಗದ ‘ಲಗಾನ್’ ಚರಿತ್ರೆ

ಲಗಾನ್ ಚಿತ್ರದ ತೆರೆಹಿಂದಿನ ಒಂದೊಂದು ಕಥೆಯೂ ಮೈ ರೋಮಾಂಚನಗೊಳಿಸುತ್ತದೆ. ಅದರ ಪ್ರಭಾವ ಬಾಕ್ಸ್ ಆಫೀಸ್ ಕಲೆಕ್ಷನ್, ಆಸ್ಕರ್ ನಾಮಿನೇಷನ್, ರಾತ್ರೋರಾತ್ರಿ ಜಾಗತಿಕವಾಗಿ ಸಿಕ್ಕ ಪ್ರಸಿದ್ಧಿ ಇವೆಲ್ಲವನ್ನೂ ಮೀರಿದ್ದು. ಇಂದಿನ ಕೃತಕ ಗ್ರಾಫಿಕ್ಸ್, ಐಷಾರಾಮಿ ಗ್ರೀನ್ ಸ್ಕ್ರೀನ್ ಸೆಟ್ಟುಗಳು ಮತ್ತು ಒಟಿಟಿ (OTT) ಜಗತ್ತಿನ ಕೃತಕ ಸಿನೆಮಾಗಳ ನಡುವೆ 25 ವರ್ಷಗಳ ಹಿಂದೆ ಕಚ್ ಮರುಭೂಮಿಯ ಧೂಳು, ಬೆವರಿನಿಂದ ಮೂಡಿಬಂದ ಆ ಅಪ್ಪಟ ಮಣ್ಣಿನ ಕಥೆ ಇಂದಿಗೂ ಪ್ರೇಕ್ಷಕರನ್ನ ತನ್ನತ್ತ ಸೆಳೆಯುತ್ತದೆ.

ಒಬ್ಬ ಸಾಮಾನ್ಯ ಹಳ್ಳಿ ಯುವಕ ‘ಭುವನ್’ ಇಡೀ ಸಾಮ್ರಾಜ್ಯಶಾಹಿ ಬ್ರಿಟಿಷರ ಅಹಂಕಾರವನ್ನ ಒಂದು ಬ್ಯಾಟ್ ಮತ್ತು ಬಾಲ್ ಮೂಲಕ ಮೆಟ್ಟಿ ನಿಲ್ಲುವ ಕಥೆಯ ಹಿಂದೆ, ಭಾರತೀಯರ ಒಗ್ಗಟ್ಟಿನ ಶಕ್ತಿಯಿತ್ತು. ತೆರಿಗೆಯನ್ನು ಮನ್ನಾ ಮಾಡಿಸಿಕೊಂಡ ಆ ಹಳ್ಳಿಗರ ವಿಜಯವನ್ನು ಇಂದಿಗೂ ಪ್ರತಿಯೊಬ್ಬ ಸಿನಿಮಾ ಪ್ರೇಮಿಯೂ ತನ್ನ ಹೃದಯದಲ್ಲಿ ಸೆಲೆಬ್ರೇಟ್‌ ಮಾಡುತ್ತಾನೆ. ʼಲಗಾನ್‌ʼ ಒಂದು ಚಿತ್ರವಲ್ಲ, ಭಾರತೀಯ ಸಿನೆಮಾದ ಹೆಮ್ಮೆ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರೇನ್ ಸ್ಟ್ರೋಕ್ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಅವಶ್ಯ: ನರರೋಗ ತಜ್ಞ ಡಾ. ರಾಕೇಶ ಎ.ವಿ

ಮೆದುಳಿನ ಪಾರ್ಶ್ವವಾಯು (ಬ್ರೇನ್ ಸ್ಟ್ರೋಕ್) ಸಂಭವಿಸಿದಾಗ ತಕ್ಷಣ ವೈದ್ಯಕೀಯ ನೆರವು ಪಡೆಯುವುದು...

ಅಮೆರಿಕ ಸರ್ಕಾರದ ವಿರುದ್ಧ ನ್ಯಾಯಾಲಯದ ಮಹತ್ವದ ಆದೇಶ: 55 ಸಾವಿರ ಗ್ರೀನ್ ಕಾರ್ಡ್ ಅರ್ಜಿಗಳ ಪರಿಗಣನೆಗೆ ಸೂಚನೆ

ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಬಯಸುವ ವಿದೇಶಿಯರಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಜಗತ್ತಿನ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ ಬೆಳಗಿದ ರೋಚಕ ಕತೆ ಗೊತ್ತೇ?

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ...