ಕುಡಿಯುವ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿದ್ದ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳುಗೋಡಿನ ಜನರು ದಶಕಗಳ ಬಳಿಕ ಪರಿಹಾರ ದೊರಕಿದೆ.
ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಬದುಕುತ್ತಿದ್ದ ಬಾಳುಗೋಡಿನ ಆದಿವಾಸಿ ಜನರ ಸಮಸ್ಯೆಯ ಬಗ್ಗೆ ಕೊಡಗು ಜಿಲ್ಲಾಡಳಿತಕ್ಕೆ ಪತ್ರಗಳ ಮೂಲಕ ನೈಜ ಹೋರಾಟಗಾರರ ವೇದಿಕೆಯ ಮುಖಂಡ ಹೆಚ್ ಎಂ ವೆಂಕಟೇಶ್ ಮತ್ತವರ ತಂಡ ಮನವಿ ಮಾಡಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ನೀಡದ ಜಿಲ್ಲಾಡಳಿತದ ವಿರುದ್ಧವೇ ಮಾನವ ಹಕ್ಕುಗಳ ಆಯೋಗಕ್ಕೆ ಹಿರಿಯ ಸಾಮಾಜಿಕ ಹೋರಾಟಗಾರ ಹೆಚ್ಎಂ ವೆಂಕಟೇಶ್ ಮತ್ತು ವೇದಿಕೆಯ ನಿಯೋಗವು ದೂರು ನೀಡಿತ್ತು.
ಈ ದೂರಿನ ಆಧಾರದ ಮೇರೆಗೆ ಇತ್ತೀಚೆಗೆ ಮಾನವ ಹಕ್ಕುಗಳ ಆಯೋಗವು ಬಾಳುಗೋಡಿನ ಆದಿವಾಸಿ ಜನರು ವಾಸಿಸುವ ಸ್ಥಳಕ್ಕೆ ಬಂದು ಪರಿಶೀಲಿಸಿತ್ತು. ಅಲ್ಲದೇ, ಒಂದು ವಾರದೊಳಗೆ ಬೋರ್‌ವೆಲ್ ಅನ್ನು ಕೊರೆಸಿ ಶಾಶ್ವತ ನೀರನ್ನು ಒದಗಿಸುವಂತೆ ತಿಳಿಸಿದ್ದರು. ಅಲ್ಲದೇ, ತಾತ್ಕಾಲಿಕವಾಗಿ ಟ್ಯಾಂಕರ್‌ನಲ್ಲಿ ನೀರನ್ನು ಸರಬರಾಜು ಮಾಡುವಂತೆ ಸೂಚಿಸಿದ್ದರು.
ಮಾನವ ಹಕ್ಕುಗಳ ಆಯೋಗದ ಸೂಚನೆಯ ಹಿನ್ನೆಲೆಯಲ್ಲಿ ಬಿಟ್ಟಂಗಲ ಗ್ರಾಮ ಪಂಚಾಯತಿಯವರು ಕೊನೆಗೂ ಕೊಳವೆಬಾವಿ ಕೊರೆಸಿದ್ದು, ಅದನ್ನು ಇಂದು ಬಾಳುಗೋಡಿನ ನಿವಾಸಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ನೀರನ್ನು ಬಳಸಲು ತೊಡಗಿದ್ದಾರೆ. ಇದೇ ವೇಳೆ ನೈಜ ಹೋರಾಟಗಾರರ ಹೋರಾಟಕ್ಕೆ, ಮಾನವ ಹಕ್ಕುಗಳ ಆಯೋಗ ನೀಡಿರುವ ಬೆಂಬಲಕ್ಕೆ ಬಾಳುಗೋಡಿನ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಡಗು | ಬಾಳುಗೋಡಿನ ಜನರ ಗೋಳಿಗೆ ಸ್ಪಂದಿಸಿದ ಮಾನವ ಹಕ್ಕುಗಳ ಆಯೋಗ; ದಶಕಗಳ ನಂತರ ಕುಡಿಯುವ ನೀರು
ಹೋರಾಟದ ಬಗ್ಗೆ ಮಾತನಾಡಿರುವ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಡಿಯುವ ನೀರಿನ ದಾಹದಲ್ಲಿ ವರ್ಷಾನುಗಟ್ಟಲೆ ಬಳಲಿ ಬೆಂಡಾದ ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ನಮ್ಮವರು ವರ್ಷಗಳಿಂದ ನೀರಿನ ದಾಹಕ್ಕೆ ಒಂದು ಒಂದೂವರೆ ಕಿಲೋಮೀಟರ್ ನಡೆಯುತ್ತಿದ್ದರು. ಕುಡಿಯುವ ನೀರಿನ ಭವಣೆಗೆ ಕೊನೆಗೂ ಕೊಳವೆಬಾವಿ ತೆಗೆಸಿಕೊಡಲಾಗಿದೆ. ಬಿಟ್ಟಂಗಲ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರೆಲ್ಲರಿಗೂ ನೈಜ್ಯ ಹೋರಾಟಗಾರರ ವೇದಿಕೆಯ ಅಭಿನಂದನೆಗಳು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಸ್ಥಳಕ್ಕೆ ಆಗಮಿಸಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಸದಸ್ಯರಿಗೆ ಅಭಿನಂದನೆ” ಸಲ್ಲಿಸುವುದಾಗಿ ತಿಳಿಸಿದ್ದಾರೆ.