ಸಚಿನ್ ದಾಸ್ ಸ್ಫೋಟಕ ಆಟ ಹಾಗೂ ನಾಯಕ ಉದಯ್ ಸಹರನ್ ಅವರ ಆಕರ್ಷಕ ಆಟದಿಂದ ಭಾರತದ ಕಿರಿಯರ ತಂಡ ದಕ್ಷಿಣ ಆಫ್ರಿಕಾ ಕಿರಿಯರ ವಿರುದ್ಧ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿ 50 ಓವರ್ಗಳ ಅಂಡರ್ 19 ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿತು.
ದಕ್ಷಿಣ ಆಫ್ರಿಕಾದ ಬೆನೋನಿಯ ವಿಲ್ಲೋಮೊರೆ ಪಾರ್ಕ್ನಲ್ಲಿ ನಡೆದ ಪಂದ್ಯದಲ್ಲಿ ಹರಿಣ ತಂಡ ನೀಡಿದ್ದ 245 ರನ್ಗಳ ಸವಾಲನ್ನು ಬೆನ್ನಟ್ಟಿದ ಟೀಂ ಇಂಡಿಯಾದ ಕಿರಿಯರ ಪಡೆ 48.5 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಆರಂಭದಲ್ಲಿ 10 ಓವರ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾದ ಟೀಂ ಇಂಡಿಯಾಗೆ 171 ರನ್ಗಳ ಐದನೇ ವಿಕೆಟ್ ಜೊತೆಯಾಟದಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಸಚಿನ್ ದಾಸ್ ಹಾಗೂ ನಾಯಕ ಉದಯ್ ಸಹರನ್ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ಕೇವಲ 4 ರನ್ಗಳಿಂದ ಶತಕ ತಪ್ಪಿಸಿಕೊಂಡ ಮಧ್ಯಮ ಕ್ರಮಾಂಕದ ಆಟಗಾರ ಸಚಿನ್ ದಾಸ್ 95 ಚೆಂಡುಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 96 ರನ್ ಬಾರಿಸಿದರೆ, ನಾಯಕ ಉದಯ್ ಶರಣ್ 124 ಎಸೆತಗಳಲ್ಲಿ 6 ಬೌಂಡರಿಯೊಂದಿಗೆ 81 ರನ್ ಗಳಿಸಿ ಗೆಲುವಿನ ರೂವಾರಿಗಳಾದರು.
ಈ ಸುದ್ದಿ ಓದಿದ್ದೀರಾ? ರಜೆ ನೀಡಿ ಮೋದಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಆದೇಶಿಸಿದ ಗೋವಾ ಸರ್ಕಾರ
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾದ ಕಿರಿಯರ ತಂಡ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 244 ರನ್ ಗಳಿಸಿತು. ಆರಂಭಿಕ ಆಟಗಾರ ಆರಂಭಿಕ ಆಟಗಾರ ಲಾನ್ ದ್ರೆ ಪ್ರಟೋರಿಯಸ್ (76), ರಿಚರ್ಡ್ ಸೆಲಿಸ್ಟಾವನೆ (64) ಅರ್ಧ ಶತಕದ ನೆರವಿನಿಂದ ತಂಡ 240ರ ಗಡಿ ದಾಟಲು ಸಾಧ್ಯವಾಯಿತು.
ಭಾರತದ ಕಿರಿಯರ ಪರ ರಾಜ್ ಲಿಂಬಿನಿ 60/3, ಮುಶೀರ್ ಖಾನ್ 43/2 ಹಾಗೂ ಸುಮಯ್ ಪಾಂಡೆ ಹಾಗೂ ನಮನ್ ತಿವಾರಿ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಫೆ.8 ರಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಕಿರಿಯರ ನಡುವೆ ಮತ್ತೊಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು ಅಲ್ಲಿ ವಿಜೇತರಾದ ತಂಡ ಫೆ.11 ರಂದು ನಡೆಯುವ ಫೈನಲ್ನಲ್ಲಿ ಭಾರತದ ಕಿರಿಯರನ್ನು ಸೆಣಸಲಿದೆ.