ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯ ಬಳಿ ಕಾರೊಂದು ಸಂಪೂರ್ಣ ಸುಟ್ಟು ಹೋಗಿದ್ದು, ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾಗಿರುವ ಘಟನೆ ಶುಕ್ರವಾರ ವರದಿಯಾಗಿದೆ.
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್(45) , ಮದ್ದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ನಿವಾಸಿ ಇಮ್ತಿಯಾಝ್(34) ಎಂದು ಗುರುತಿಸಲಾಗಿದೆ. ಇಂದು ಸಾರ್ವಜನಿಕರು ಕೆರೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಮೂರು ಮಂದಿ ಬೆಳ್ತಂಗಡಿಯಿಂದ ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಅಶೋಕ್ ಕೆ.ವಿ, ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಲವರು ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಎಫ್.ಎಸ್.ಎಲ್ ತಂಡ ಭೇಟಿ
ಇನ್ನು, ಘಟನೆ ಸಂಬಂಧ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಕಾರಿನಲ್ಲಿ ಪತ್ತೆಯಾಗಿರುವ ಮೃತದೇಹಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇಬ್ಬರು ನಾಪತ್ತೆ; ಪೊಲೀಸರಿಂದ ತನಿಖೆ ಚುರುಕು
ಕೆಎ43 ರಿಜಿಸ್ಟ್ರೇಷನ್ ನಂಬರಿನ ಎಸ್‌ಪ್ರೆಸ್ ಕಾರು ರಫೀಕ್ ಎಂಬುವವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಯಾವ ವಿಷಯಕ್ಕೆ ಸಂಬಂಧಪಟ್ಟಂತೆ ತುಮಕೂರು ಕಡೆಗೆ ಮೂವರು ಹೋಗಿದ್ದರು ಎಂದು ಇನ್ನೂ ತಿಳಿದು ಬಂದಿಲ್ಲ ಎನ್ನಲಾಗಿದೆ.
ಐದು ಜನರು ಕಾರಿನಲ್ಲಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಯ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
