ಹುಲಿ ಉಗುರು ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ಬೆನ್ನಲ್ಲೇ, ಹುಲಿ ಉಗುರು ಧರಿಸಿ ಫೋಟೊ ತೆಗೆಸಿಕೊಂಡಿದ್ದ ದರ್ಶನ್, ರಾಕ್‌ಲೈನ್ ವೇಂಕಟೇಶ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಅವರಿಗೆ ಸಂಕಷ್ಟ ಎದುರಾಗಿದೆ. ಅ.25ರಂದು ಅರಣ್ಯಾಧಿಕಾರಿಗಳು ನಟ ದರ್ಶನ್ ತೂಗುದೀಪ ಅವರ ನಿವಾಸದ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ವಂದೇ ಮಾತರಂ ಸಮಾಜ ಸೇವಾ ಸಂಸ್ಥೆಯಿಂದ ನಟ ದರ್ಶನ್ ವಿರುದ್ಧ ದೂರು ದಾಖಲಾಗಿದೆ. ಅಕ್ಟೋಬರ್ 25ರಂದು ಅರಣ್ಯಾಧಿಕಾರಿಗಳು ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ದರ್ಶನ್ ಮನೆಗೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.
ವರ್ತೂರು ಸಂತೋಷ್ ಅವರ ಬಂಧನದ ಬಳಿಕ ಹುಲಿ ಉಗುರು ಧರಿಸಿದ್ದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಬರುತ್ತಿದಂತೆ ಮನೆ ಮುಂದೆ ದರ್ಶನ್ ಕಾರು ಚಾಲಕ ಬಂದಿದ್ದಾನೆ. ಅವರ ಮುಂದೆಯೇ ಮನೆಯೊಳಗೆ ಹೋದ ಅರಣ್ಯಾಧಿಕಾರಿಗಳ ಎರಡು ತಂಡವು ಮನೆಯೊಳಗೆ ಶೋಧ ಕಾರ್ಯ ಮುಂದುವರೆಸಿದೆ. ನಂತರ, ಒಂದು ತಂಡವು ಹೊರ ಬಂದಿದ್ದು, ಇನ್ನೊಂದು ತಂಡವು ಮನೆಯಲ್ಲಿ ತಪಾಸಣೆ ನಡೆಸುತ್ತಿತ್ತು.
ದೇವಸ್ಥಾನವೊಂದರ ಸ್ಥಳದಲ್ಲಿ ನಿಂತು ತೆಗೆದಿರುವ ದರ್ಶನ್ ಅವರ ಫೋಟೋದಲ್ಲಿ ಅವರು ಹುಲಿ ಉಗುರು ಧರಿಸಿದ್ದಾರೆ. ದರ್ಶನ್ ಬಳಿ ಇರುವುದು ನಿಜವಾದ ಹುಲಿ ಉಗುರು? ಅಥವಾ ಅಲ್ಲವಾ? ಎಂಬ ಬಗ್ಗೆ ಗೊತ್ತಾಗಬೇಕಿದೆ. ಒಂದು ವೇಳೆ ಹುಲಿ ಉಗುರು ಇರುವುದು ಖಚಿತವಾದರೆ ದರ್ಶನ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಇನ್ನು ದರ್ಶನ್ ಮಾತ್ರವಲ್ಲದೇ ಈಗಾಗಲೇ ದೂರು ದಾಖಲಾದ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರು ಧರಿಸಿದ್ದಾರೆನ್ನಲಾದ ಎಲ್ಲ ನಟರು, ನಾಯಕರ ಮನೆಗೂ ನೋಟಿಸ್ ನೀಡಲಾಗಿದೆ.
ನಟ ಜಗ್ಗೇಶ್ ಮನೆ ತಪಾಸಣೆ
ಇನ್ನು ಅರಣ್ಯಾಧಿಕಾರಿಗಳು ನಟ ಜಗ್ಗೇಶ್ ಅವರ ಮನೆಯ ಮೇಲೂ ದಾಳಿ ನಡೆಸಿ, ಹುಲಿ ಉಗುರಿನ ಲಾಕೆಟ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸ್ವತಃ ನಟ ಜಗ್ಗೇಶ್ ಅವರು ಟ್ವೀಟ್ ಮಾಡಿದ್ದು, “ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು,ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ” ಎಂದು ಹೇಳಿದ್ದಾರೆ.
ರಾಜಕಾರಣಿ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಮನೆ ಮೇಲೆ ದಾಳಿ
ನಿಖಿಲ್ ಮೇಲೂ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪವಿದೆ. ಹಾಗಾಗಿ, ಅರಣ್ಯಾಧಿಕಾರಿಗಳು ನಗರದ ಜೆಪಿ ನಗರದಲ್ಲಿರುವ ನಿಖಿಲ್ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ. ಇಲಾಖೆಗೆ ಸೇರಿದ ವಾಹನವೊಂದರಲ್ಲಿ ಮೂವರು ಪುರುಷ ಮತ್ತು ಒಬ್ಬ ಮಹಿಳಾ ಅಧಿಕಾರಿ ಆಗಮಿಸಿ ತಪಾಸಣೆ ಕಾರ್ಯ ನಡೆಸಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಅವರ ಮನೆ ಮೇಲೆ ದಾಳಿ
ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆಗಳ ಮೇಲೆ ದಾಳಿ ನಡೆಸಿರುವ ಆರಣ್ಯಾಧಿಕಾರಿಗಳು ಹುಲಿಯುಗುರಿನ ಪೆಂಡೆಂಟ್ ಗಾಗಿ ಶೋಧ ನಡೆಸಿದ್ದಾರೆ. ರಾಕ್ ಲೈನ್ ಮನೆ. ಅವರ ಐಷಾರಾಮಿ ಮನೆಯ ಸೆಲ್ಲರ್ ನಲ್ಲಿ ಪಾರ್ಕ್ ಆಗಿರುವ ಕಾರುಗಳ ತಪಾಸಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ.
“ಅರಣ್ಯ ಇಲಾಖೆಯಿಂದ ನಾಲ್ಕು ತಂಡ ರಚನೆ ಮಾಡಿದ್ದೇವೆ. ಹುಲಿ ಉಗುರು ಧರಿಸಿದ್ದ ಬಗ್ಗೆ ದೂರು ಬಂದ ಮೇರೆಗೆ ದೂರಿನಲ್ಲಿರುವ ಎಲ್ಲ ಆರೋಪಿಗಳ ಮನೆಗೆ ತೆರಳಿ ನೋಟಿಸ್ ಕೊಟ್ಟಿದ್ದೇವೆ. ಇದಾದ ನಂತರ ನೋಟಿಸ್ ಕೊಟ್ಟವರ ಎಲ್ಲರ ಮನೆಗೂ ತೆರಳಿ ತಪಾಸಣೆ ಮಾಡಲಾಗುತ್ತಿದೆ. ಮನೆಗಳ ಪರೀಶೀಲಿಸಿ ಉಗುರು ಪತ್ತೆಯಾದ್ರೆ ಅವರನ್ನ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ. ನಟ ದರ್ಶನ್ ಸೇರಿ ಎಲ್ಲಾರ ಮನೆಗೆ ನಮ್ಮ ತಂಡ ತೆರಳಿದೆ” ಎಂದು ಡಿಸಿಎಫ್ಓ ರವಿಂದ್ರ ಮಾಹಿತಿ ನೀಡಿದ್ದಾರೆ.