ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಹುದ್ದೆಗೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ರಹ್ಮತುಲ್ಲಾ ಅಸಾದಿ ನೂತನ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಹಿರಿಯ ಸದಸ್ಯೆ ಗೀತಾ ರಮೇಶ್ ರವರು ಆಯ್ಕೆಯಾಗಿದ್ದಾರೆ.
ವಿಶೇಷ ಅಂದರೆ, ಈ ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗೀತಾ ರಮೇಶ್ ಈ ಅವಧಿಯಲ್ಲಿ ಉಪಾಧ್ಯಕ್ಷರಾದರೆ, ಉಪಾಧ್ಯಕ್ಷರಾಗಿದ್ದ ರಹ್ಮತುಲ್ಲಾ ಅಸಾದಿ ಅಧ್ಯಕ್ಷರಾಗಿದ್ದಾರೆ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸೊಪ್ಪುಗುಡ್ಡೆ ರಾಘವೇಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಗಣೇಶ್ ನಾಮಪತ್ರ ಸಲ್ಲಿಸಿದ್ದರು. ಒಟ್ಟು 15 ಸ್ಥಾನವಿರುವ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ 6 ಸ್ಥಾನ ಪಡೆದಿತ್ತು. ಕಾಂಗ್ರೆಸ್ 8 ಸ್ಥಾನ ಪಡೆದಿತ್ತು. ಓರ್ವರು ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಈ ನಡುವೆ ಬಿಜೆಪಿಯ ಸಂಸದ, ಶಾಸಕರು ಸೇರಿ ಬಿಜೆಪಿಯ ಬಲಾಬಲ 8 ಆಗುತ್ತಿತ್ತು. ಆದಾಗ್ಯೂ, ಲೆಕ್ಕಾಚಾರದ ಗೆಲುವಿನಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ಸಾಧಿಸಿದೆ. ಆ ಮೂಲಕ ಇಂದು ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಕಾಂಗ್ರೆಸ್ ಪಟ್ಟಣ ಪಂಚಾಯಿತಿಯನ್ನು ತನ್ನದಾಗಿಸಿಕೊಂಡಿದೆ.
ವರದಿ: ಲಿಯೋ ಅರೋಜ
