ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಳೆದ ಭಾನುವಾರ(ನ.19)ದಂದು ಬೆಳಗ್ಗೆ ವಿದ್ಯುತ್ ತಂತಿ ತುಳಿದು ತಾಯಿ-ಮಗಳು ಮೃತಪಟ್ಟ ಪ್ರಕರಣ ಇನ್ನೂ ಹಸಿರಾಗಿರುವಾಗಲೇ, ಬೆಂಗಳೂರಿನ ಜನನಿಬಿಡ ಮಲ್ಲೇಶ್ವರಂ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಬೋರ್ಡೊಂದು ಜನರ ಬಲಿ ಪಡೆಯಲು ಕಾಯುತ್ತಿದೆ.
ಬೆಸ್ಕಾಂ ಕಚೇರಿಯಿಂದ 100 ಮೀಟರ್ ದೂರದಲ್ಲಿರುವ ವೈಟ್‌ಫೀಲ್ಡ್ ಮುಖ್ಯರಸ್ತೆಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಭಾನುವಾರ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸೌಂದರ್ಯ (23) ಮತ್ತು ಅವರ ಒಂಬತ್ತು ತಿಂಗಳ ಮಗು ಸಜೀವ ದಹನವಾಗಿದ್ದರು. ಈ ಘಟನೆಗೆ ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ. ಇದು ಇನ್ನೂ ಹಸಿರಾಗಿರುವಾಗಲೇ ಬೆಂಗಳೂರಿನ ಮಲ್ಲೇಶ್ವರಂ ಜಂಕ್ಷನ್‌ನಲ್ಲಿರುವ ಟ್ರಾಫಿಕ್ ಬೋರ್ಡೊಂದು ವಾಲಿಕೊಂಡು ನೇತಾಡುತ್ತಿದೆ.
ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲೊಂದಾಗಿರುವ ಮಲ್ಲೇಶ್ವರಂನ ಕೆ ಸಿ ಜನರಲ್ ಆಸ್ಪತ್ರೆಯ ಪ್ರವೇಶದ್ವಾರದಲ್ಲೇ ಇರುವ ಟ್ರಾಫಿಕ್ ಬೋರ್ಡೊಂದು ಒಂದು ಕಡೆಗೆ ವಾಲಿ ನೇತಾಡುತ್ತಿದೆ. ಅದರ ಹತ್ತಿರದಲ್ಲೇ ಮಲ್ಲೇಶ್ವರಂ ಪೊಲೀಸ್ ಸ್ಟೇಷನ್ ಹಾಗೂ ಟ್ರಾಫಿಕ್ ಕಂಟ್ರೋಲ್ ಮಾಡುವ ಚೌಕಿಯೂ ಇದೆ. ಆದರೆ, ಅದು ಯಾರ ಗಮನಕ್ಕೂ ಬಂದಿಲ್ಲದಿರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ಈ ದಿನ.ಕಾಮ್‌ನ ಪ್ರತಿನಿಧಿಯೋರ್ವರು ಕಚೇರಿಗೆ ಆಗಮಿಸುವ ವೇಳೆ ಇದನ್ನು ಗಮನಿಸಿ ಫೋಟೋ, ವಿಡಿಯೋ ಮಾಡಿದ್ದಾರೆ. ಬಳಿಕ ಟ್ವೀಟ್ ಮಾಡುವ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರ ಗಮನಕ್ಕೆ ತಂದಿದ್ದು, ‘ಜನರ ಬಲಿಗೆ ಕಾಯುತ್ತಿದೆಯಾ ಈ ಟ್ರಾಫಿಕ್ ಬೋರ್ಡ್? ಪೊಲೀಸ್ ಸ್ಟೇಷನ್, ಆಸ್ಪತ್ರೆ ಇದೆ, ಎದುರಲ್ಲೇ ಟ್ರಾಫಿಕ್ ಕಂಟ್ರೋಲ್ ಮಾಡೋ ಚೌಕಿಯೂ ಇದೆ? ಇದು ಯಾರ ಕಣ್ಣಿಗೂ ಬೀಳಲಿಲ್ಲವೇ? ದಯವಿಟ್ಟು ಅನಾಹುತ ಆಗುವ ಮುನ್ನ ಸರಿಪಡಿಸಿ’ ಎಂದು ವಿನಂತಿಸಿಕೊಂಡಿದ್ದಾರೆ.
ಜನರ ಬಲಿಗೆ ಕಾಯುತ್ತಿದೆಯಾ ಈ ಟ್ರಾಫಿಕ್ ಬೋರ್ಡ್? ಪೊಲೀಸ್ ಸ್ಟೇಷನ್, ಆಸ್ಪತ್ರೆ ಇದೆ, ಎದುರಲ್ಲೇ ಟ್ರಾಫಿಕ್ ಕಂಟ್ರೋಲ್ ಮಾಡೋ ಚೌಕಿಯೂ ಇದೆ? ಇದು ಯಾರ ಕಣ್ಣಿಗೂ ಬೀಳಲಿಲ್ಲವೇ? ದಯವಿಟ್ಟು ಅನಾಹುತ ಆಗುವ ಮುನ್ನ ಸರಿಪಡಿಸಿ
Location: KC General Hospital Entrance@BlrCityPolice @blrcitytraffic @CPBlr @osd_cmkarnataka pic.twitter.com/EwuZjCnF42— Irshad Venur (@muhammadirshad6) November 21, 2023
ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು, ಮಲ್ಲೇಶ್ವರಂ ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ, ಕೂಡಲೇ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲು ಸೂಚನೆ ನೀಡಿದ್ದಾರೆ.
@Mvmtraffic check and do the needful.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) November 21, 2023
ಈ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಈ ದಿನ.ಕಾಮ್, ಮಲ್ಲೇಶ್ವರಂ ಟ್ರಾಫಿಕ್ ಪೊಲೀಸರನ್ನು ಸಂಪರ್ಕಿಸಿದಾಗ, ಈ ಬೆಳವಣಿಗೆ ಬಗ್ಗೆ ನಮ್ಮ ಗಮನಕ್ಕೆ ಈಗಷ್ಟೇ ಬಂದಿದೆ. ಮಾಹಿತಿ ಅರಿತ ಕೂಡಲೇ ಬಿಬಿಎಂಪಿಯ ಇಂಜಿನಿಯರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೇವೆ. ಶೀಘ್ರವೇ ಸರಿಪಡಿಸಲು ಆಗಮಿಸಲಿದ್ದಾರೆ. ಸರಿಯಾದ ಕೂಡಲೇ ಮಾಹಿತಿ ನೀಡುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ.